ಕಾಶ್ಮೀರ,ಏ05(AZM):ಕಾಶ್ಮೀರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಬಿಜೆಪಿ ಪಕ್ಷವು ತನ್ನ ಕೇಸರಿ ಬಣ್ಣವನ್ನು ಹಸಿರು ಬಣ್ಣಕ್ಕೆ ಬದಲಾಯಿಸಿ ಮತದಾರರ ಮನವೊಲಿಸಲು ಹೊಸ ತಂತ್ರವನ್ನು ಅನುಸರಿಸಿದೆ.
ಬಿಜೆಪಿಯು ಶ್ರೀನಗರದ ತನ್ನ ಅಭ್ಯರ್ಥಿ ಖಾಲಿದ್ ಜಹಾಂಗೀರ್ ಪರ ಬಿರುಸಿನ ಪ್ರಚಾರ ನಡೆಸಲು ಹಸಿರು ಬಣ್ಣದಲ್ಲಿ ಜಾಹೀರಾತುಗಳನ್ನು ಪ್ರಕಟಿಸುತ್ತಿದೆ.
ರಾಜಕೀಯ ಧುರೀಣರಾದ ನ್ಯಾಶನಲ್ ಕಾನ್ಫರೆನ್ಸ್ (ಎನ್ಸಿ)ನ ಅಧ್ಯಕ್ಷ ಹಾಗೂ ಹಾಲಿ ಸಂಸದ ಫಾರೂಕ್ ಅಬ್ದುಲ್ಲಾ, ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ)ಯ ಅಗಾ ಮುಹ್ಸಿನ್, ಪೀಪಲ್ಸ್ ಕಾನ್ಫರೆನ್ಸ್ನ (ಪಿಸಿ) ಇರ್ಫಾನ್ ಅನ್ಸಾರಿ ವಿರುದ್ಧ ಮಾಜಿ ಪತ್ರಕರ್ತರಾಗಿರುವ ಜಹಾಂಗೀರ್ ಸ್ಪರ್ಧಿಸಲಿದ್ದಾರೆ.
ಸ್ಥಳೀಯ ಹಲವು ದಿನಪತ್ರಿಕೆಗಳಲ್ಲಿ ಬಿಜೆಪಿ ಹಸಿರು ಜಾಹೀರಾತು ಪ್ರಕಟಿಸಿದೆ. ಅಲ್ಲದೆ, ಜಹಾಂಗೀರ್ ಅವರನ್ನು ಬೆಂಬಲಿಸಿ ಇದೇ ರೀತಿಯ ಹೋರ್ಡಿಂಗ್ ಅನ್ನು ಸ್ಥಾಪಿಸಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನೆಟ್ಟಿಗರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.
''ಕಾಶ್ಮೀರದಲ್ಲಿ ಬಣ್ಣಗಳು ಬದಲಾಗುತ್ತಿವೆ. ಹೇಗೆ ? ಅದು ಚುನಾವಣೆಯ ರಾಜಕೀಯ ಬಣ್ಣ. ಕೇಸರಿ ಹೇಗೆ ಹಸಿರಾಯಿತು? ಇದು ಬಿಜೆಪಿಯ ಬಣ್ಣದ ತಟ್ಟೆಯಲ್ಲಿ ಪಿಡಿಪಿ ಬಿಟ್ಟು ಹೋದ ಅಳಿಸಲಾಗದ ಗುರುತೇ ?'' ಎಂದು ಪಿಡಿಪಿಯ ಮಾಜಿ ನಾಯಕ ಹಾಗೂ ಸಚಿವ ಹಸೀಬ್ ದ್ರಾಬು ಟ್ವೀಟ್ ಮಾಡಿದ್ದಾರೆ.