ನವದೆಹಲಿ,ಏ 06 (MSP): ಭಾರತೀಯ ಸೇನಾ ಪಡೆಯನ್ನು 'ಮೋದಿ ಸೇನೆ' ಎಂದು ಕರೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ಪತ್ರ ಬರೆದು ಎಚ್ಚರಿಕೆ ನೀಡಿದ್ದು, ಆದರೆ ಕಾಂಗ್ರೆಸ್ ಆಯೋಗದ ಈ ನಡೆಯನ್ನು ಟೀಕಿಸಿದೆ.
ಚುನಾವಣಾ ಆಯೋಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರ ಮೃದು ದೋರಣೆ ತಾಳಿರುವ ನಡೆಯ ಬಗ್ಗೆ ಆಕ್ಷೇಪ ಎತ್ತಿರುವ ಕಾಂಗ್ರೆಸ್ ಚುನಾವಣಾ ಆಯೋಗ ಅವರಿಗೆ 'ಲವ್ ಲೆಟರ್ ' ಬರೆದಿದೆ ಎಂದು ಟೀಕಿಸಿದೆ.
ಕಾಂಗ್ರೆಸ್ ಪಕ್ಷವೂ , ಯೋಗಿ ಆದಿತ್ಯನಾಥ್ ಅವರು ಮೋದಿ ಸೇನೆ ಎಂದು ಕರೆದು ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ. ನಮಗೆ ಇದೀಗ "ಮಾದರಿ ನೀತಿ ಸಂಹಿತೆ ಈಗ ಮೋದಿ ನೀತಿ ಸಂಹಿತೆಯಾಗಿದೆಯೆ? ಎಂದು ಅನುಮಾನ ಕಾಡಲಾರಂಭಿಸಿದೆ. ಯೋಗಿ ಭಾರತೀಯ ಸೇನೆಗೆ ಅವಮಾನಿಸಿದ್ದಾರೆ, ಆದರೆ ಆಯೋಗ ಅವರಿಗೆ ಪ್ರೇಮ ಪತ್ರ ಬರೆದಿದೆ" ಇಲ್ಲವಾದರೆ ಏಕೆ ಆಯೋಗವು ಇಂಥವರ ಮೇಲೆ ತೀವ್ರ ಕ್ರಮ ತೆಗೆದುಕೊಳ್ಳದೆ ಮೃದು ಧೋರಣೆ ತಾಳಿದೆ? ಎಂದು ಕಾಂಗ್ರೆಸ್ ಪ್ರಧಾನ ವಕ್ತಾರ ರಣದೀಪ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.