ನವದೆಹಲಿ, ಏ 08 (MSP): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 'ಸಂಕಲ್ಪ ಪತ್ರ' ಎಂಬ ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ನವದೆಹಲಿಯಲ್ಲಿ ಏ ೮ ರ ಸೋಮವಾರ ಬಿಡುಗಡೆ ಮಾಡಿದೆ. ಪ್ರಣಾಳಿಕೆಗೆ ಮುನ್ನ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾರತದ ಇತಿಹಾಸದಲ್ಲಿ 2014ರಿಂದ 2019ರವರೆಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವ ವರ್ಷ. ನಮ್ಮ ಆಡಳಿತದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ. ಯುಪಿಎ ಆಡಳಿತದ ಹತ್ತು ವರ್ಷಗಳು ಹೇಗೆ ಇತ್ತು ಎನ್ನುವುದನ್ನು ನೆನಪಿಸಿಕೊಳ್ಳಿ ಎಂದು ಹೇಳಿದರು.
ಬಿಜೆಪಿಯ ಸಂಕಲ್ಪ ಪತ್ರ ಒಟ್ಟು 48 ಪುಟಗಳನ್ನು ಹೊಂದಿದ್ದು ,ಬಿಡುಗಡೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್ ಇಂದಿನ 'ಸಂಕಲ್ಪ ಪತ್ರ'ದಲ್ಲಿ ದೇಶದ ಅಭಿವೃದ್ಧಿಯ ಉದ್ದೇಶವಿದೆ, ಬಡವರ ಶ್ರೇಯೋದ್ಧಾರದ ಕನಸಿದೆ. ಭಯೋತ್ಪಾದನೆಯ ಬಗ್ಗೆ ನಾವು ಶೂನ್ಯ ಸಹಿಷ್ಠುತೆಯನ್ನು ಹೊಂದಿದ್ದೇವೆ ಎಂದು ಈಗಾಗಲೇ ಸಾಬೀತಾಗಿದೆ. ಇದೇ ನಿಟ್ಟಿನಲ್ಲಿ ಮತ್ತಷ್ಟು ದೃಢ ಹೆಜ್ಜೆ ಇಡುತ್ತಿದ್ದೇವೆ ಎಂದರು.