ಶೃಂಗೇರಿ, ಎ09(SS): ಪಾಕಿಸ್ತಾನದ ಉಗ್ರಗಾಮಿಗಳನ್ನು ಬಗ್ಗು ಬಡಿಯಲು ಹಿಂದಿನ ಕಾಂಗ್ರೆಸ್ ಸರಕಾರವೂ ಸರ್ಜಿಕಲ್ ದಾಳಿ ನಡೆಸಿತ್ತು. ಆದರೆ ಅದರ ಪ್ರಚಾರ ಮಾಡಲಿಲ್ಲ ಎಂದು ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಸೇನೆಯ ಕ್ರಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಪಾಕಿಸ್ತಾನದ ಉಗ್ರಗಾಮಿಗಳನ್ನು ಬಗ್ಗು ಬಡಿಯಲು ಹಿಂದಿನ ಕಾಂಗ್ರೆಸ್ ಸರಕಾರವೂ ಸರ್ಜಿಕಲ್ ದಾಳಿ ನಡೆಸಿತ್ತು. ಆದರೆ ಅದರ ಪ್ರಚಾರ ಮಾಡಲಿಲ್ಲ ಎಂದು ಹೇಳಿದ್ದಾರೆ.
ಈ ಬಾರಿ ಕೇಂದ್ರದಲ್ಲೂ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ಸಂಸದನಾಗಿ ನಾನು ಆಯ್ಕೆಗೊಂಡರೆ, ಕ್ಷೇತ್ರ ಶಾಸಕರ ಜತೆಯಾಗಿ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಗಂಭೀರ ಪ್ರಯತ್ನ ನಡೆಸುತ್ತೇನೆ. ಕೇಂದ್ರದಿಂದ ಬರುವ ಅನುದಾನದಲ್ಲಿ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲು ಶ್ರಮಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮದ ನಷ್ಟಕ್ಕೆ ಕೇಂದ್ರ ಸರಕಾರವೇ ಹೊಣೆಯಾಗಿದೆ. ಅಂಬಾನಿ ಸಹೋದರರಿಗಾಗಿ ಬಿಎಸ್ಎನ್ಎಲ್ ಸಂಸ್ಥೆ ನಷ್ಟ ಹೊಂದುವಂತೆ ಮಾಡಿದ್ದಾರೆ. ಇದರಿಂದ ಲಕ್ಷಾಂತರ ಉದ್ಯೋಗಿಗಳ ಭವಿಷ್ಯಕ್ಕೆ ಆತಂಕ ಉಂಟಾಗಿದೆ. ಐದು ವರ್ಷದಲ್ಲಿ ಅಂಬಾನಿಯಂತಹ ಉದ್ಯಮಿಗಳ ಆಸ್ತಿ ಹಲವಾರು ಪಟ್ಟು ಏರಿಕೆಯಾಗಲು ಕೇಂದ್ರ ಸರಕಾರದ ಬೆಂಬಲವೇ ಕಾರಣ ಎಂದು ಟೀಕಿಸಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಜನ ಸಾಮಾನ್ಯರ ಬಳಿ ನಗದು ಚಲಾವಣೆ ಹೆಚ್ಚಿದ್ದು, ನೋಟ್ ಅಮಾನಿಕರಣದಂತಹ ತಪ್ಪು ನಿರ್ಧಾರದಿಂದ ಆರ್ಥಿಕತೆಯ ಮೇಲೆ ಹೊರೆ ಬಿದ್ದಿದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದವರಿಗೆ ದಿನ ನಿತ್ಯ ವ್ಯವಹಾರಕ್ಕೆ ತೀವ್ರ ತೊಂದರೆಯಾಗಿದೆ. ಕ್ಷೇತ್ರದ ಅಭಿವೃದ್ಧಿ ಜತೆಗೆ ಶಾಸಕ ಟಿ.ಡಿ.ರಾಜೇಗೌಡ ಅವರ ಕೈ ಬಲಪಡಿಸಲು ಸಂಸದನಾಗಿ ತಮ್ಮನ್ನು ಆಯ್ಕೆ ಮಾಡಬೇಕು ಎಂದು ವಿನಂತಿಸಿದರು.