ನವದೆಹಲಿ,ಏ 09(MSP): ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿರುವ ಜಾಹೀರಾತೊಂದರಲ್ಲಿ ಎಡವಟ್ಟಾಗಿದ್ದು ರಾಹುಲ್ ಗಾಂಧಿಗೆ ಈ ಭಾವಚಿತ್ರದಲ್ಲಿ ಮೂರು ಕೈ ಇರುವಂತೆ ಕಾಣಿಸುತ್ತಿದೆ.
ಪಕ್ಷಕ್ಕೆ ಮಾತ್ರವಲ್ಲದೆ ಈ ಜಾಹೀರಾತು ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ಗಾಂಧಿಗೂ ಮುಜುಗರ ಉಂಟುಮಾಡುವಂತೆ ಮಾಡಿದೆ. ‘ನ್ಯಾಯ್ ಯೋಜನೆ’ ಎಂಬ ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿರುವ ಪ್ರಚಾರದ ಜಾಹೀರಾತಿನಲ್ಲಿ ರಾಹುಲ್ ಗಾಂಧಿ ವೃದ್ಧೆಯನ್ನು ಅಲಂಗಿಸಿಕೊಂಡು ಆಕೆಗೆ ಸಂತೈಸುತ್ತಿರುವ ಚಿತ್ರವಿದೆ. ಇದರಲ್ಲಿ ಒಂದು ಕೈ ಆಕೆಯ ತಲೆ ಮೇಲೆ, ಮತ್ತೊಂದು ಕೈಯಲ್ಲಿ ಏನನ್ನೋ ಹಿಡಿದುಕೊಂಡಿರುವಂತಿದ್ದು ಮೂರನೇ ಕೈ ವೃದ್ಧೆ ಹಿಡಿದುಕೊಂಡಿರುವಂತಿದೆ.
ಈ ಫೋಟೋ ಇದೀಗ ವೈರಲ್ ಆಗಿದ್ದು, ಮೂಲ ಫೋಟೋವನ್ನು ಜಾಹೀರಾತಿಗೆ ಬಳಸುವ ವೇಳೆ ಮಾಡಿದ ಎಡವಟ್ಟು ಇದಕ್ಕೆಲ್ಲಾ ಕಾರಣವಾಗಿದೆ. ಮೂಲ ಪೋಟೋದಲ್ಲಿ ವೃದ್ಧೆಯನ್ನು ರಾಹುಲ್ ಜೊತೆಗೆ ಮತ್ತೊರ್ವ ವ್ಯಕ್ತಿ ಕೂಡಾ ಸಂತೈಸುತ್ತಿದ್ದಾರೆ. ಆದರೆ ಜಾಹೀರಾತಿಗೆ ಭಾವಚಿತ್ರ ಬಳಸುವಾಗ ಮತ್ತೊರ್ವನ ಚಿತ್ರವನ್ನು ಅಳಿಸಿದ್ದು ಕೈ ಭಾಗ ಮಾತ್ರ ಹಾಗೆಯೇ ಉಳಿದುಕೊಂಡಿದ್ದು ಇದಕ್ಕೆಲ್ಲಾ ಕಾರಣವಾಗಿದೆ.