ನಾಗಾಲ್ಯಾಂಡ್,ಏ09(AZM):ಹಿಂದುತ್ವ ನೀತಿಯನ್ನು ಒಪ್ಪಲಾಗದ ಹಿನ್ನಲೆ ನಾಗಾಲ್ಯಾಂಡ್ ಬಿಜೆಪಿಯ 37 ಸದಸ್ಯರು ಏಕಾಏಕಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ನಾಗಾಲ್ಯಾಂಡ್ ಬಿಜೆಪಿ ಅಧ್ಯಕ್ಷ ತಮ್ಜೆನ್ ಇಮ್ನಾ ಅಲೊಂಗ್ ಲೊಂಗ್ಕುಮಾರ್ಗೆ ಬರೆದಿರುವ ಪತ್ರದಲ್ಲಿ, ಪಕ್ಷದ ತತ್ವ ಮತ್ತು ಸಿದ್ಧಾಂತಗಳು, ಮುಖ್ಯವಾಗಿ, ಹಿಂದುತ್ವ ನೀತಿಯನ್ನು ಒಪ್ಪಲಾಗದ ಮತ್ತು ತಮ್ಮ ನೇತೃತ್ವದ ಪಕ್ಷದ ರಾಜ್ಯ ನಾಯಕತ್ವ ಮತ್ತು ಕಾರ್ಯದರ್ಶಿ ಅನಂತ ಮಿಶ್ರಾ ಅವರ ವರ್ತನೆ ಮತ್ತು ಕಾರ್ಯವೈಖರಿ ಆಕ್ಷೇಪಾರ್ಹ ಮತ್ತು ಅಸಹ್ಯಕರವಾಗಿರುವ ಕಾರಣ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ತಮ್ಮ ರಾಜೀನಾಮೆಗೆ ಸದಸ್ಯರು ಆರು ಕಾರಣಗಳನ್ನು ನೀಡಿದ್ದು, ಇಂಡೊ-ನಾಗಾ ಶಾಂತಿ ಮಾತುಕತೆ ವಿಷಯದಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗದಿರುವುದೂ ಅವುಗಳಲ್ಲಿ ಒಂದಾಗಿದೆ. 2015ರಲ್ಲಿ ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗದ್ದರೂ ಮತ್ತು ಅನೇಕ ಬಾರಿ ಎನ್ಡಿಎ ಸರಕಾರ ನಾಗಾ ರಾಷ್ಟ್ರೀಯ ರಾಜಕೀಯ ಗುಂಪುಗಳ ಜೊತೆ ಮಾತುಕತೆ ನಡೆಸಿದ್ದರೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಸದಸ್ಯರು ದೂರಿದ್ದಾರೆ.