ಮೈಸೂರು, ಆ 30 (DaijiworldNews/MS): ಜನರ ಕಣ್ಣೀರು ಒರೆಸುವ ಸಲುವಾಗಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ನುಡಿದಂತೆ ನಡೆಯುವ ಪಕ್ಷ ಎನಿಸಿಕೊಂಡಿದೆ. ಇದನ್ನು ಅರಿತಿರುವ ಜನರು ತಮ್ಮ ಸಮಸ್ಯೆಗೆ ಕಾಂಗ್ರೆಸ್ ನಿಂದ ಖಂಡಿತ ಪರಿಹಾರ ಸಿಗುತ್ತದೆ ಎಂದು ತಿಳಿದು ನಮ್ಮನ್ನು ಅತೀ ದೊಡ್ಡ ಬಹುಮತದಿಂದ ಅಧಿಕಾರಕ್ಕೆ ತಂದಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ, ಮೊದಲ ಸಚಿವ ಸಂಪುಟ ಸಭೆಯಲ್ಲೇ ನಾವು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ತಾತ್ವಿಕ ಒಪ್ಪಿಗೆ ನೀಡುವ ಮೂಲಕ ನುಡಿದಂತೆ ನಡೆದಿದ್ದೇವೆ. ಜನರ ಮುಖದಲ್ಲಿ ಅಷ್ಟರ ಮಟ್ಟಿಗೆ ನಗು ತರಿಸಿದ್ದೇವೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ
ಈಗಾಗಲೆ 3 ಗ್ಯಾರಂಟಿ ಯೋಜನೆಗಳ ಫಲ ಜನರಿಗೆ ಸಿಗುತ್ತಿದೆ. ಇಂದಿನಿಂದಲೇ ನಾಲ್ಕನೇ ಗ್ಯಾರಂಟಿ ಯೋಜನೆ ಕೂಡ ಪ್ರತಿ ಮನೆ ಮನೆಯನ್ನು ತಲುಪುತ್ತಿದೆ. ನಮ್ಮ ತಾಯಂದಿರ ಮುಖದಲ್ಲಿನ ನಗುವನ್ನು ನೋಡುವ ಈ ಕ್ಷಣಕ್ಕಾಗಿ ನಾನು ಹಲವು ದಿನಗಳಿಂದ ಕಾಯುತ್ತಿದ್ದೆ ಎಂದರು.
ನಾನು ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಬೇಕೆಂದು ಹಗಲು, ರಾತ್ರಿ ಶ್ರಮಿಸಿದ್ದೇನೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವಸಂಪುಟದ ಎಲ್ಲ ಸಹೋದ್ಯೋಗಿಗಳ ಮಾರ್ಗದರ್ಶನ, ನನ್ನ ಇಲಾಖೆಯ ಎಲ್ಲ ಅಧಿಕಾರಿಗಳ ಶ್ರಮದಿಂದಾಗಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಕಾರದಿಂದಾಗಿ ಅದು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಈಗ ಆ ಕ್ಷಣ ಬಂದಿದೆ. ತಾಯಿ ಚುಮುಂಡೇಶ್ವರಿ ಸನ್ನಿಧಾನದಲ್ಲಿ, ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ, ಜಗತ್ತಿನಲ್ಲೇ ವಿಶಿಷ್ಟವಾದ ಇಂತಹ ಯೋಜನೆಯನ್ನು ನನ್ನ ಇಲಾಖೆಯಿಂದ ಜಾರಿಗೊಳಿಸುತ್ತಿರುವುದು ನನಗೆ ಖುಷಿಯನ್ನು ಇಮ್ಮಡಿಗೊಳಿಸಿದೆ. ಇದನ್ನು ನನ್ನ ಜೀವನದ ಸಾರ್ಥಕ ಕ್ಷಣ ಎಂದೇ ಭಾವಿಸುತ್ತೇನೆ ಎಂದಿದ್ದಾರೆ
ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ, ಮಕ್ಕಳಿಗಾಗಿ, ಹಿರಿಯ ನಾಗರಿಕರಿಗಾಗಿ, ವಿಶೇಷ ಚೇತನರಿಗಾಗಿ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಯೋಚನೆಗಳನ್ನು ಹೊಂದಿದ್ದೇನೆ