ಬೆಂಗಳೂರು,,ಆ 31 (DaijiworldNews/AK): ರೈತಪರ ಯೋಜನೆಗಳ ಮುಂದುವರಿಕೆ ಮತ್ತು ಸಮರ್ಪಕ ವಿದ್ಯುತ್ ಕೊಡಲು ಆಗ್ರಹಿಸಿ ರಾಜ್ಯದಾದ್ಯಂತ ತಹಸೀಲ್ದಾರ್ ಕಚೇರಿಗಳ ಮುಂದೆ ಸೆಪ್ಟೆಂಬರ್ 8ರಂದು ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಎಚ್ಚರಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಕೊಡಬೇಕು. ಬರ ನಿರ್ವಹಣೆಗೆ ಸಮರ್ಪಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬರ ನಿರ್ವಹಿಸಲು ಯುದ್ಧೋಪಾದಿ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದರು. ಗ್ಯಾರಂಟಿ ಕಾರಣಕ್ಕಾಗಿ ರೈತಪರ ಯೋಜನೆಗಳನ್ನು ನಿಲ್ಲಿಸದಿರಿ ಎಂದು ಅವರು ತಿಳಿಸಿದರು.
ರೈತರ ಮೇಲೆ ನಿಮಗೇಕೆ ಇಷ್ಟು ದ್ವೇಷ? ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಶೇ 40 ಮಳೆ ಕಡಿಮೆ ಆಗಿದೆ ಎಂದು ವಿವರಿಸಿದರು. ರಾಜ್ಯದ ಎಲ್ಲ ಜಲಾಶಯಗಳಲ್ಲಿ ಕಳೆದ ವರ್ಷದ ಸಂಗ್ರಹ ಗಮನಿಸಿದರೆ ಕಡಿಮೆ ಇದೆ. ನೀರಿನ ಹರಿವು ಕೂಡ ಅತ್ಯಂತ ಕಡಿಮೆ ಇದೆ. ಇದರ ಜೊತೆಗೆ ರೈತರ ಪಂಪ್ಸೆಟ್ಗಳಿಗೆ ಹಗಲು 7 ಗಂಟೆ ವಿದ್ಯುತ್ ಕೊಡಲಾಗುತ್ತಿತ್ತು. ಈಗ ಒಂದು ತಿಂಗಳಿನಿಂದ 4 ಗಂಟೆಯೂ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ಕಳೆದ 100 ದಿನಗಳ ಆಡಳಿತಾವಧಿಯಲ್ಲಿ 42ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು. ಈ ವಿಷಯದಲ್ಲೂ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ರಾಜ್ಯ ಉಪಾಧ್ಯಕ್ಷರಾದ ಲೋಕೇಶ್ ಗೌಡ, ಮಂಜುಳಾ, ಕಾರ್ಯಾಲಯ ಕಾರ್ಯದರ್ಶಿ ಶಶಿಕುಮಾರ್ ಗುತ್ತನವರ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.