ಬೆಂಗಳೂರು, ಸೆ 03 (DaijiworldNews/AK): ಅನಾರೋಗ್ಯದ ಕಾರಣ 4 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಲಘು ಸ್ಟ್ರೋಕ್ ಹಿನ್ನೆಲೆಯಲ್ಲಿ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚೇತರಿಸಿಕೊಂಡಿದ್ದಾರೆ.
ಡಿಸ್ಚಾರ್ಜ್ ಆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರು, ತಂದೆ ತಾಯಿ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ. ಅಪೋಲೋ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸುತ್ತೇನೆ. ಭಗವಂತ ನನಗೆ ಪುನರ್ಜನ್ಮ ಕೊಟ್ಟಿದ್ದಾನೆ. 64 ವರ್ಷಗಳಲ್ಲಿ ನಾನು ಮೂರು ಬಾರಿ ಮರುಜನ್ಮ ಪಡೆದಿದ್ದೇನೆ. ನನ್ನ ಅದೃಷ್ಟಕ್ಕೆ ನುರಿತ ತಜ್ಞರು ಬೆಂಗಳೂರಿನಲ್ಲೇ ಇದ್ದರು. ಯಾವುದೇ ನಿರ್ಲಕ್ಷ್ಯ ಮಾಡದೇ ವೈದ್ಯರು ಚೆನ್ನಾಗಿ ನೋಡಿಕೊಂಡಿದ್ದಾರೆ. ಭಗವಂತನ ದಯೆಯಿಂದ ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಎಂದರು.