ಬೆಂಗಳೂರು, ಸೆ 05 (DaijiworldNews/MS):"ನಾನು ಮಾತ್ರ ಮಂತ್ರಿಯಾಗಿ, ಶಾಸಕರುಗಳು ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೆ ಸಿಗುತ್ತದೆ. ನಿಗಮ ಮಂಡಳಿಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಕನಕಪುರದಲ್ಲಿ ಮಾಧ್ಯಮಗಳು 'ನಿಗಮ ಮಂಡಲಿ ನೇಮಕಾತಿ ಹಾಗೂ ಯಾರಿಗೆಲ್ಲಾ ಅವಕಾಶ ನೀಡಲಾಗುತ್ತದೆ' ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು "ಎಲ್ಲಾ ಶಾಸಕರು ಕೇಳುತ್ತಿಲ್ಲ 20- 25 ಜನರು ಕೇಳುತ್ತಿದ್ದಾರೆ. ಅದರಲ್ಲಿ 15 ಜನರಿಗೆ ಅವಕಾಶ ನೀಡುತ್ತೇವೆ, ಮಿಕ್ಕ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಿದ್ದು ಅವರಿಗೆ ಎರಡುವರೆ ವರ್ಷ ಅವಕಾಶ ನೀಡುತ್ತೇವೆ. ನಮ್ಮ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಾಗೂ ಅವಕಾಶ ಕೊಡುತ್ತೇವೆ, ಮಾಧ್ಯಮಗಳಿಗೆ ಅವಸರ ಏಕೆ? ಶಾಸಕರುಗಳು ನಮ್ಮ ನಾಯಕರುಗಳಲ್ಲವೇ?” ಎಂದರು.
ರಾಮನಗರದಲ್ಲಿ ಭಾರತ್ ಜೋಡೋ ನೆನಪಿನ ಪಾದಯಾತ್ರೆ
ಸೆ.7 ಕ್ಕೆ ಭಾರತ್ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದೇ ನೆನಪಿಗೆ ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎನ್ನುವ ಯೋಚನೆ ಆದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ರಾಮನಗರದಲ್ಲಿ ಮಾಡುತ್ತಿದ್ದೇವೆ.
“ಮುಖ್ಯಮಂತ್ರಿಗಳು ಅಂದು ನಮ್ಮ ಜೊತೆ ಹೆಜ್ಜೆ ಹಾಕಲಿದ್ದಾರೆ, ಅದೇ ದಿನ ಸಚಿವ ಸಂಪುಟ ಸಭೆ ಇರುವ ಕಾರಣ ಇತರೇ ಮಂತ್ರಿಗಳಿಗೆ ಸೆ.8 ರಂದು ಮಾಡಬಹುದು ಎಂದು ಸೂಚನೆ ನೀಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆಗಳ ಕಾಲ ಸಂಜೆ 5 ರಿಂದ 6 ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದರು.