ಬೆಂಗಳೂರು, ಸೆ 09 (DaijiworldNews/AK): ಜೆಡಿಎಸ್ ಏಕಾಂಗಿಯಾಗಿಯಾದರೂ ಚುನಾವಣೆ ಸ್ಪರ್ಧಿಸಲಿ, ಬಿಜೆಪಿ ಜೊತೆ ಮೈತ್ರಿಯಾದರೂ ಮಾಡಿಕೊಳ್ಳಲಿ. ನಾವು ಆ ಬಗ್ಗೆ ಹಿಂದೆಯೂ ತಲೆ ಕೆಡಿಸಿಕೊಂಡಿಲ್ಲ, ಮುಂದೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತ್ರಿಯಿಸಿದ ಅವರು, ಕಾಂಗ್ರೆಸ್ ನಮ್ಮ ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರಿಸಿದ ಅವರು, ನಾವು ಅವರ ಸುದ್ದಿಗೆ ಹೋಗಿಲ್ಲ. ಈ ಹಿಂದೆ ಹಿರಿಯರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಹೋರಾಡುತ್ತೇವೆ ಎಂದಿದ್ದರು. ಹಾಗಿದ್ರೆ ಅವರ ಮಾತು, ಅವರ ಸಿದ್ಧಾಂತ ಈಗ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಜೆಡಿಎಸ್ ಬಿಜೆಪಿ ಮೈತ್ರಿಗೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಅವರ ರಾಜಕೀಯ ನಿಲುವುಗಳ ಬಗ್ಗೆ ಯಾವ ನಾಯಕರು ಪ್ರತಿಕ್ರಿಯೆ ನೀಡಬೇಕೋ ಅವರು ನೀಡುತ್ತಾರೆ. ಅವರ ರಾಜಕೀಯ ಅಸ್ತಿತ್ವಕ್ಕಾಗಿ ಅವರು ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಅವರ ಬಗ್ಗೆ ಮೊದಲ ದಿನದಿಂದಲೂ ನಮಗೆ ಗೊತ್ತು. ಒಂದೊಂದು ದಿನ ಒಂದೊಂದು ಮಾತನಾಡುತ್ತಿದ್ದಾರೆ? ಅವರು ಮಾತನಾಡುತ್ತಲೇ ಇರಲಿ ಎಂದರು.