ಬಳ್ಳಾರಿ,ಏ10(AZM): ಬಳ್ಳಾರಿ ಜಿಲ್ಲೆಯ ಹೊಸಪೇಟಿ ತಾಲೂಕಿನಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಬಿಜೆಪಿ ಮುಖಂಡನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದೇವರಮನೆ ಚಂದ್ರಶೇಖರಪ್ಪ (50) ಆರೋಪಿ. ಕೃತ್ಯವೆಸಗಿದ ಬಳಿಕ ಈತ ತಲೆಮರಿಸಿಕೊಂಡಿದ್ದಾನೆ ಎನ್ನಲಾಗಿದೆ.
ಸಂತ್ರಸ್ತೆಯ ತಂದೆ-ತಾಯಿ ಬಡವರಾಗಿದ್ದು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಅಪ್ರಾಪ್ತೆಯು ತನ್ನ ಅಜ್ಜಿಯ ಊರಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಬಾಲಕಿಯು ಅಜ್ಜಿಯ ಹೋಟೆಲ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಳು. ಆರೋಪಿ ದೇವರಮನೆ ಚಂದ್ರಶೇಖರಪ್ಪ ಹೋಟೆಲ್ಗೆ ಚಹಾ ಕುಡಿಯಲೆಂದು ಆಗಾಗ ಬರುತ್ತಿದ್ದನು. ಬಾಲಕಿಗೆ ಆರೋಪಿಯು 20, 50 ರೂ. ಹೀಗೆ ಆಗಾಗ ಹಣ ನೀಡಿ ಆಮಿಷವೊಡ್ಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸುಮಾರು ಆರು ತಿಂಗಳ ಹಿಂದೆ ಆರೋಪಿಯು ತನ್ನ ಮನೆಯೊಳಗೆ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಈ ಕೃತ್ಯವನ್ನು ಆರೋಪಿ ಹಲವು ದಿನಗಳ ಕಾಲ ಮುಂದುವರಿಸಿದ್ದಾನೆ. ಈ ವಿಷಯವನ್ನು ಯಾರ ಮುಂದೆಯೂ ಬಾಯಿ ಬಿಡಬಾರದು. ಬಾಯಿಬಿಟ್ಟರೆ ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ನೀಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ..
ಕಳೆದ ಎರಡು ದಿನಗಳ ಹಿಂದೆ ಸಂತ್ರಸ್ತೆ ಬಾಲಕಿಯು ಹೊಟ್ಟೆನೋವೆಂದು ತಾಯಿಯ ಬಳಿ ಅವಲತ್ತುಕೊಂಡಿದ್ದಾಳೆ. ಆಕೆಯನ್ನು ಹೊಸಪೇಟೆ ಪಟ್ಟಣದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಆರೋಪಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯನಾಗಿದ್ದು, ರಾಜಕೀಯ ಪ್ರಭಾವ ಬಳಸಿ ಪ್ರಕರಣದಿಂದ ಹಿಂದೆ ಸರಿಯಲು ಯತ್ನಿಸುತ್ತಿದ್ದಾನೆ. ಸದ್ಯ ಆತ ಗ್ರಾಮದಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.