ಬೆಂಗಳೂರು, ಸೆ 12 (DaijiworldNews/AK): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಂತಿಮವಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿರುವುದು ನಿಜ ಎಂದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಒಪ್ಪಿಕೊಂಡಿದ್ದಾರೆ. ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೀಟು ಹಂಚಿಕೆ ಬಗ್ಗೆ ಮೋದಿ ಜೊತೆ ಕುಮಾರಸ್ವಾಮಿ ಮಾತಾಡುತ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಇದೀಗ ಹೆಚ್ಡಿ ಕುಮಾರಸ್ವಾಮಿ ಪ್ರಧಾನಿ ಮೋದಿ ಆಹ್ವಾನಕ್ಕೆ ಎದುರು ನೋಡುತ್ತಿದ್ದಾರೆ.
ಕುಮಾರಸ್ವಾಮಿ ಅವರು ಇಂದು ದೆಹಲಿಗೆ ತೆರಳಬೇಕಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಇನ್ನೂ ಅಹ್ವಾನ ಬಾರದ ಹಿನ್ನೆಲೆ ಕುಮಾರಸ್ವಾಮಿ ದಿಲ್ಲಿಗೆ ಹೋಗದೇ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾರೆ. ಮೋದಿಯಿಂದ ಆಹ್ವಾನ ಬಂದ ತಕ್ಷಣ ಕುಮಾರಸ್ವಾಮಿ ದೆಹಲಿಗೆ ತೆಳಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು ಮೈತ್ರಿ ಬಗ್ಗೆ ದೂರವಾಣಿ ಮೂಲಕ ಬಿಜೆಪಿ ವರಿಷ್ಠರ ಜತೆ ಚರ್ಚಿಸಿದ್ದಾರೆ. ಇದೇ ಶುಕ್ರವಾರ ದೇವೇಗೌಡ, ಕುಮಾರಸ್ವಾಮಿ ದೆಹಲಿಗೆ ತೆರಳಿ ಅಂತಿಮ ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಗಣೇಶ ಹಬ್ಬಕ್ಕೂ ಮುನ್ನವೇ ದೆಹಲಿಯಲ್ಲೇ ಉಭಯ ನಾಯಕರು ಮೈತ್ರಿ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.