ಮಂಡ್ಯ,ಏ 11 (MSP): " ಕರ್ನಾಟಕದಲ್ಲಿ ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಯಾರು ಬರಲಿಲ್ಲ ಆದರೆ, ಈಗ ಮಾತ್ರ ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂದು ಮೈಸೂರಿನಲ್ಲಿ ಬುರುಡೆ ಬಿಟ್ಟು ಹೋಗಿದ್ದಾರೆ " ಎಂದು ಮೋದಿ ವಿರುದ್ದ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.
ಶ್ರೀರಂಗಪಟ್ಟಣದ ಪಾಲಹಳ್ಳಿ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ ಅವರು , ಪ್ರಧಾನಿ ಮಾತೆತ್ತಿದರೆ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದೇ ಸಂದರ್ಭ "ನೀವೆಲ್ಲಾ ನಮ್ಮ ಕೈಬಿಡುವುದಿಲ್ಲ ,ಎಂಬ ನಂಬಿಕೆ ಇದೆ. ನೀವೆಲ್ಲಾ ನನ್ನನ್ನು ನಂಬಬೇಕು ಇನ್ನು ಆರು ತಿಂಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಲೋಕಸಭಾ ಚುನಾವಣೆಯ ನಂತರ ರೈತಪರ ಯೋಜನೆಗಳು ರಾಜ್ಯದಲ್ಲಿ ಜಾರಿಯಾಗಲಿವೆ. ಎಲ್ಲರೂ ಕೂಡಾ ನನ್ನನ್ನು ನಂಬಬೇಕು ’ ಎಂದು ವಿನಂತಿಸಿಕೊಂಡರು.
’ಬೆಂಗಳೂರಿನ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಸ್ಪರ್ಧಿಸಲಿಲ್ಲವೇ ? ಹೀಗಿರುವಾಗ ನಿಖಿಲ್ ಮಂಡ್ಯದಲ್ಲಿ ನಿಂತರೆ ತಪ್ಪೇ ? ರೈತರು ಅಪ್ರಚಾರಗಳಿಗೆ ಕಿವಿಕೊಡಬೇಡಿ. ನಿಖಿಲ್ಗೆ ಬಡಬಗ್ಗರ ಮೇಲೆ ಕಾಳಜಿ ಇದೆ. ಹೀಗಾಗಿಯೇ ಆತನನ್ನು ಚುನಾವಣೆಗೆ ನಿಲ್ಲಿಸಿದ್ದೇನೆ’ ಎಂದರು.