ಬೆಂಗಳೂರು ಸೆ 16 (DaijiworldNews/MS): ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ಪ್ರಕಾರ ತಮಿಳುನಾಡಿಗೆ ರಾಜ್ಯದಿಂದ 5 ಸಾವಿರ ಕ್ಯೂಸೆಕ್ ನೀರು ಹರಿಸುವುದು ಕಷ್ಟವಾಗಿರುವ ಮಧ್ಯೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆ.18ರಂದು ದೆಹಲಿಯಲ್ಲಿ ಸಭೆ ನಡೆಸಲು ನಿರ್ಧರಿಸಿದೆ.
ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಚ್ಚುಕಟ್ಟು ಪ್ರದೇಶದ ಎಲ್ಲ ರಾಜ್ಯದ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ತಮಿಳುನಾಡಿಗೆ ಹದಿನೈದು ದಿನಗಳ ಕಾಲ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಮೂರನೇ ಬಾರಿಗೆ ಆದೇಶ ನೀಡಿದ ಬಳಿಕ ಈ ಸಭೆ ನಡೆಯುತ್ತಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಈ ಸಭೆಯಲ್ಲಿ ಕಾವೇರಿ ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸು ಹಾಗೂ ಕರ್ನಾಟಕ ಅದನ್ನು ಪಾಲಿಸಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸುವ ಸಾಧ್ಯತೆಯಿದೆ. ಕಾವೇರಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿರುವ ಕಾರಣ ನಿಯಂತ್ರಣ ಸಮಿತಿ ಶಿಫಾರಸು ಪಾಲಿಸುವುದು ಕಷ್ಟ ಎಂದು ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ತಿಳಿಸಿದೆ