ಅನಂತನಾಗ್,,ಸೆ 17 (DaijiworldNews/AK): ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನಲ್ಲಿ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್ಕೌಂಟರ್ ಐದನೇ ದಿನಕ್ಕೆ ಮುಂದುವರಿದಿದೆ.
ಪ್ಯಾರಾ ಕಮಾಂಡೋಗಳು, ಸಾವಿರಾರು ಸೈನಿಕರು ಗಡೋಲ್ ನ ದಟ್ಟ ವಾದ ಅರಣ್ಯದೊಳಗೆ ಗುಂಡಿನ ಚಕಮಕಿಯಲ್ಲಿ ತೊಡಗಿದ್ದಾರೆ.ಎರಡರಿಂದ ಮೂರು ಭಯೋತ್ಪಾದಕರಿದ್ದು, ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಯುದ್ಧಕ್ಕೆ ಅನುಕೂಲಕರ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ.
100 ಗಂಟೆಗಳಲ್ಲಿ, ಯೋಧರು ನೂರಾರು ಮೋಟಾರು ಶೆಲ್ ಗಳು ಮತ್ತು ರಾಕೆಟ್ ಗಳನ್ನು ಹಾರಿಸಿದ್ದಾರೆ. ಹೈಟೆಕ್ ಉಪಕರಣಗಳೊಂದಿಗೆ ಶಂಕಿತ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅಲ್ಲದೆ ಸುಧಾರಿತ ಡ್ರೋನ್ ಗಳನ್ನು ಬಳಸಿಕೊಂಡು ಸ್ಫೋಟಕಗಳನ್ನು ಬೀಳಿಸಿದ್ದಾರೆ.
ಸೇನೆಯ ನಾರ್ದರ್ನ್ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಎನ್ಕೌಂಟರ್ ಸ್ಥಳಕ್ಕೆ ಭೇಟಿ ನೀಡಿದ್ದು, ಭಯೋತ್ಪಾದಕರ ವಿರುದ್ಧ ಸೈನಿಕರು ಡ್ರೋನ್ಗಳು ಮತ್ತು ಫೈರ್ ಪವರ್ ಸೇರಿದಂತೆ ಸುಧಾರಿತ ಸಾಧನಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಕುರಿತು ವಿವರಿಸಿದರು.