ಹೈದರಾಬಾದ್, ಸೆ, 19 (DaijiworldNews/HR): ಹುಟ್ಟಿನಿಂದಲೇ ದೃಷ್ಟಿಹೀನ ಎಂಬ ಕಾರಣಕ್ಕೆ ಶಾಲೆ ಮತ್ತು ಸಮಾಜದಲ್ಲಿ ಎಲ್ಲರಿಂದಲೂ ಹೀಯಾಳಿಸಿಕೊಂಡಿದ್ದ ಶ್ರೀಕಾಂತ್ ಬೊಳ್ಳ ಎಂಬ ಯುವಕ ಅಮೇರಿಕದ ಪ್ರತಿಷ್ಠಿತ ಎಂಐಟಿಯಿಂದ ಪದವಿ ಪಡೆದು, ಉದ್ಯೋಗದ ದೊರೆತರೂ ಅದನ್ನು ತಿರಸ್ಕರಿಸಿ ಊರಿಗೆ ಮರಳಿ ಉದ್ಯಮ ಸ್ಥಾಪಿಸಿ ಇಂದು ವಾರ್ಷಿಕ 150 ಕೋಟಿಗೂ ಅಧಿಕ ವರಮಾನ ಪಡೆಯುತ್ತಿದ್ದು ಇವರ ಕಥೆ ಎಲ್ಲರಿಗೂ ಸ್ಪೂರ್ತಿದಾಯಕ.
ಶ್ರೀಕಾಂತ್ಗೆ ಅವರಿಗೆ ದೃಷ್ಟಿದೋಷವಿದ್ದಿದ್ದರಿಂದ ಶಾಲೆಯಲ್ಲಿ ಕೊನೆಯ ಬೆಂಚ್ನಲ್ಲಿ ಕುಳ್ಳಿರಿಸಲಾಗುತ್ತಿತ್ತು. ಪಿಟಿ ಅವಧಿಯಲ್ಲಿ ಹೊರಗಡೆ ಹೋಗಲು ಬಿಡುತ್ತಿರಲಿಲ್ಲ. ಅಲ್ಲದೆ ಪ್ರತಿ ಸಂದರ್ಭದಲ್ಲೂ ಹೀಯಾಳಿಸಿ ಆತನನ್ನು ನಿರ್ಲಕ್ಷಿಸಲಾಗುತ್ತಿತ್ತು.
ಇನ್ನು ಪಿಯುಸಿಯಲ್ಲಿ ವಿಜ್ಞಾನ ಅಭ್ಯಾಸ ಮಾಡಲು ಅನುಮತಿ ದೊರೆಯದೇ ಹೋದಾಗ, ನ್ಯಾಯಾಲಯದ ಮೆಟ್ಟಿಲು ಏರಿ ಆತ ಅನುಮತಿ ಪಡೆದುಕೊಂಡು ಬಳಿಕ ಐಐಟಿಯಲ್ಲಿ ಪ್ರವೇಶಕ್ಕೆ ಯತ್ನಿಸಿದರೂ, ಅಲ್ಲಿ ಆತ ದೃಷ್ಟಿಹೀನ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಇದರಿಂದ ಶ್ರೀಕಾಂತ್ ಅಮೆರಿಕದ ಎಂಐಟಿಯಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದಾಗ, ಅಲ್ಲಿ ಪ್ರವೇಶ ದೊರಕಿತು.
ಎಂಐಟಿಯಿಂದ ಪದವಿ ಪಡೆದು ಮರಳಿದ ಶ್ರೀಕಾಂತ್ ಆಂಧ್ರ ಪ್ರದೇಶದಲ್ಲಿ ಅನೇಕ ಉದ್ಯಮ ಘಟಕ ಹೊಂದಿದ್ದು, ಅನೇಕ ಮಂದಿಗೆ ಕೆಲಸ ನೀಡಿದ್ದಾರೆ. ಅವರ ಪೈಕಿ ಶೇ. 50 ಮಂದಿ ವಿಕಲಚೇತನರು ಎನ್ನುವುದೇ ವಿಶೇಷ.
ಇನ್ನು ಶ್ರೀಕಾಂತ್ ಅವರು ಮಾಜಿ ರಾಷ್ಟ್ರಪತಿ ಮತು ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂರೊಂದಿಗೆ ಯುವಕರನ್ನು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸುಶಿಕ್ಷಿತರನ್ನಾಗಿ ಲೀಡ್ ಇಂಡಿಯಾ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿರುವುದು ಕೂಡ ವಿಶೇಷ.