ಬೆಂಗಳೂರು, ಸೆ 21 (DaijiworldNews/MS): ಸ್ವ ಉದ್ಯೋಗಕ್ಕೆ ಅನುವು ಮಾಡುವಂತಹ ತಾಂತ್ರಿಕ ತರಬೇತಿ ಕಾರ್ಯಕ್ರಮಗಳನ್ನ ಆಯೋಜಿಸುವ ನಿಟ್ಟಿನಲ್ಲಿ ಆದ್ಯತೆ ನೀಡಿ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧಿಕಾರಿಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಸೂಚನೆ ನೀಡಿದರು.
ಇಂದು ನಗರದ ವಿದ್ಯಾರಣ್ಯಪುರದಲ್ಲಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೋ. ಯು. ಆರ್ ರಾವ್ ವಿಜ್ಞಾನ ಭವನಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆಯನ್ನು ಕೈಗೊಂಡು, ಅಕಾಡೆಮಿಯ ಬಗ್ಗೆ ವಿಸ್ತ್ರುತ ಮಾಹಿತಿಯನ್ನು ಪಡೆದುಕೊಂಡರು.
ಅಕಾಡೆಮಿಯ ಮೂಲಕ ಕನ್ನಡದಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಮುಂಚೂಣಿ ವಿಷಯಗಳಲ್ಲಿ ಕೌಶಲ್ಯಾಭಿವೃದ್ದಿಗೆ ಸಂಪನ್ಮೂಲ ಕೇಂದ್ರವಾಗಿ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಈ ತರಬೇತಿ ಕಾರ್ಯಕ್ರಮಗಳ ಅಡಿಯಲ್ಲಿ ಯುವಜನತೆ, ರೈತರು ಮತ್ತು ವಿದ್ಯಾರ್ಥಿಗಳಲ್ಲಿ ಸ್ವ ಉದ್ಯೋಗ ಪ್ರಾರಂಭಕ್ಕೆ ಅನುವು ಮಾಡಿಕೊಡುವಂತಹ ತರಬೇತಿಗಳಿಗೆ ಆದ್ಯತೆ ನೀಡಬೇಕು. ಸಾಮಾನ್ಯ ಜನರಿಗೆ ಅನುಕೂಲವಾಗುವಂತಿರಬೇಕು, ಸ್ವಯಂ ವೃತ್ತಿಗಳನ್ನು ಕೈಗೋಳ್ಳಲು ಯುವಕರನ್ನು ಪ್ರೋತ್ಸಾಹ ನೀಡುವಂತಿರಬೇಕು. ಹಾಗೂ ತಮ್ಮ ಉದ್ಯೋಗಕ್ಕೆ ತಕ್ಕಂತಹ ತಾಂತ್ರಿಕತೆಯನ್ನು ಅಭಿವೃದ್ದಿಗೊಳಿಸಲು ಹಾಗೂ ಕೌಶಲ್ಯ ಅಭಿವೃದ್ದಿಗೆ ಅನುವು ಮಾಡಿಕೊಡುವಂತಹ ತರಬೇತಿ ಶಿಬಿರಗಳನ್ನು ಆಯೋಜಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಜ್ಞಾನದ ತರಬೇತಿ:
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವಂತ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯುವಲ್ಲಿ ಅಗತ್ಯವಿರುವಂತಹ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯ ವಿಡಿಯೋಗಳನ್ನು ಮಾಡುವುದು, ಅವುಗಳನ್ನ ಶಾಲೆಗಳಿಗೆ ನಿಯಮಿತವಾಗಿ ತಲುಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಮಹಿಳಾ ಪತ್ರಕರ್ತರಿಗೆ ವಿಜ್ಞಾನದ ವಿಷಯಗಳ ಸಂವಹನ ತರಬೇತಿ:
ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ದಿನಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ವರದಿಗಳು ಹೆಚ್ಚಾಗುವುದರಿಂದ ಓದುಗರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಹೆಚ್ಚಿನ ಪತ್ರಕರ್ತರು ವಿಜ್ಞಾನ ಮತ್ತು ತಂತ್ರಜ್ಞಾನದ ವರದಿಯನ್ನು ಕೈಗೊಳ್ಳಲಿ ಎನ್ನುವ ಉದ್ದೇಶದಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನದ ಅಕಾಡೆಮಿಯ ವತಿಯಿಂದ ಪತ್ರಕರ್ತರಿಗೆ ತರಬೇತಿಯನ್ನು ಆಯೋಜಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಮಹಿಳಾ ಪತ್ರಕರ್ತೆಯರಿಗೆ ತರಬೇತಿಯನ್ನು ಆಯೋಜಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ಬಸವರಾಜು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಿಇಓ ಡಾ. ಎ.ಎಂ ರಮೇಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.