ಬೆಂಗಳೂರು, ಸೆ 22 (DaijiworldNews/MS): ಮುಂಗಾರು ಮಳೆ ಕೈಕೊಟ್ಟು ರಾಜ್ಯದ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು, ಇನ್ನೊಂದೆಡೆ ಸುಪ್ರೀಂಕೋರ್ಟ್ ಆದೇಶ ಹಿನ್ನಲೆಯಲ್ಲಿ ತಮಿಳುನಾಡಿಗೆ ನೀರು ಬಿಟ್ಟ ಹಿನ್ನಲೆಯಲ್ಲಿ ಹಲವು ಸಂಘಟನೆಗಳು ತೀವ್ರ ಪ್ರತಿಭಟನೆಗೆ ಮುಂದಾಗಿದೆ. ಈ ಬೆನ್ನಲ್ಲೇ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ಆಗದಂತೆ ನಗರದ ಪೊಲೀಸರು ಹೈ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದ್ದು, ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಂದು ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಕಾವೇರಿ ಬಿಕ್ಕಟ್ಟು ಕುರಿತು ಚರ್ಚೆಗಳು ನಡೆಸಲಿದ್ದು, ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ವಿಧಾನಸೌಧದಲ್ಲಿ ಸಂಜೆ 6 ಗಂಟೆಗೆ ಸಭೆ ನಡೆಯಲಿದೆ. ಸುಪ್ರೀಂ ಕೋರ್ಟ್ ತಮಿಳುನಾಡಿಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶನ ನೀಡಿದೆ.