ಹುಬ್ಬಳ್ಳಿ, ಸೆ 22 (DaijiworldNews/AK):ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಆರಂಭದಿಂದಲೇ ತಪ್ಪು ಹೆಜ್ಜೆ ಇಟ್ಟಿದೆ. ಕಾವೇರಿ ವಿಚಾರದಲ್ಲಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ಪ್ರಶ್ನೆ ಬರುವುದಿಲ್ಲ. ಇಷ್ಟರ ನಡುವೆಯೂ ನಾವು ಸಾಧ್ಯವಾದಷ್ಟು ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಡುತ್ತಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ 2500 ಕ್ಯೂಸೆಕ್ಸ್ ನೀರು ಬಿಡುವುದಾಗಿ ಹೇಳುವ ಅವಶ್ಯಕತೆ ಇರಲಿಲ್ಲ ಎಂದರು.
ತಮಿಳುನಾಡು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಒಂದೆಡೆ ಕುಳಿತು ಚರ್ಚೆ ಮಾಡಬೇಕು. ರಾಜ್ಯದ ಎಲ್ಲಾ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಮುಂದೆಯೂ ರಾಜ್ಯ ಸರ್ಕಾರದ ಜೊತೆಗೆ ಇರಲಿದ್ದೇವೆ. ಸದ್ಯದ ನೀರಿನ ಪರಿಸ್ಥಿತಿಯ ಕುರಿತು ಸಮಗ್ರ ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡ ಕಳುಹಿಸಿ ಕೊಡುವಂತೆ ಕೇಳಿದ್ದಾರೆ. ಅದನ್ನು ಕೇಂದ್ರ ಜಲಶಕ್ತಿ ಸಚಿವರಿಗೆ ಮನವರಿಕೆ ಮಾಡಿದ್ದೇವೆ. ಮತ್ತೊಮ್ಮೆ ಸದ್ಯದ ನೀರಿನ ಸಂಗ್ರಹದ ಅಧ್ಯಯನ ಮಾಡಲು ಹೇಳಿದ್ದೇವೆ. ಅದಕ್ಕೆ ಕೇಂದ್ರ ಸಚಿವರು ಸಹ ಒಪ್ಪಿಕೊಂಡಿದ್ದಾರೆ ಎಂದರು.
ಕಾವೇರಿ ಸೇರಿದಂತೆ ಯಾವುದೇ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ಸರ್ವ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇವೆ. ಆದಷ್ಟು ಬೇಗ ನಮ್ಮ ನೀರನ್ನು ನಾವು ಉಳಿಸಿಕೊಳ್ಳಬೇಕು ಎಂದರು.