ಬೆಂಗಳೂರು, ಸೆ 22 (DaijiworldNews/AK):ಮತದಾರರಿಗೆ ಆಮಿಷವೊಡ್ಡಿ ಗೆದ್ದಿರುವ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತೆ ಬಿಜೆಪಿ ಆಗ್ರಹಿಸುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ರಾಜ್ಯ ಚುನಾವಣಾಧಿಕಾರಿಗೆ ಇಂದು ಮನವಿಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಜೀನಾಮೆ ನೀಡುವಂತೆ ನಿರ್ದೇಶಿಸಲು ಚುನಾವಣಾಧಿಕಾರಿಯನ್ನು ಕೋರಲಾಗಿದೆ ಎಂದರು.
ಮತದಾರರಿಗೆ ಆಸೆ, ಆಮಿಷ, ಅಭಿಲಾಷೆ, ಒತ್ತಡ ವಿಧಿಸಬಾರದೆಂದು ಕಾನೂನಿದೆ. ಆದರೆ, ಬಟ್ಟೆ ತೊಳೆಯುವ ಮತ್ತು ಇಸ್ತ್ರಿ ಹಾಕುವ ಮಡಿವಾಳ ಸಮುದಾಯಕ್ಕೆ ಇಸ್ತ್ರಿ ಪೆಟ್ಟಿಗೆ ಮತ್ತು ಮನೆಮನೆಗೆ ಕುಕ್ಕರ್, ಹಣ ಹಂಚಿದ ಬಗ್ಗೆ ಸಿದ್ದರಾಮಯ್ಯನವರ ಸುಪುತ್ರ, ಮಾಜಿ ಶಾಸಕ ಯತೀಂದ್ರ ಅವರು ಭಾಷಣದಲ್ಲಿ ತಿಳಿಸಿದ್ದಾರೆ. ಈ ವಿಡಿಯೋ ತುಣುಕು, ಸುದ್ದಿ ನಾಡಿನಾದ್ಯಂತ ಪಸರಿಸಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯನವರು ನೈತಿಕತೆ ಕುರಿತು, ಡಾ. ಅಂಬೇಡ್ಕರರ ಸಂವಿಧಾನದ ಬಗ್ಗೆ ಬಹಳ ಮಾತನಾಡುತ್ತಾರೆ. ಅದೇ ಸಂವಿಧಾನ, ಅದೇ ಚುನಾವಣೆ ನೀತಿಸಂಹಿತೆ ಪ್ರಕಾರ ಸಿದ್ದರಾಮಯ್ಯನವರು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಪರಿಣಾಮವಾಗಿ ಅವರು ಗೆದ್ದಿದ್ದಾಗಿ ಅವರ ಮಗನೇ ಹೇಳಿದ್ದಾರೆ. ಸಿದ್ದರಾಮಯ್ಯನವರೂ ಈ ಸಭೆಯಲ್ಲಿದ್ದರು ಎಂದು ತಿಳಿಸಿದರು.