ಮುಂಬೈ, ಸೆ 25 (DaijiworldNews/HR): ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್ನಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ಬೈಕ್ ಚಲಾಯಿಸುತ್ತಿದ್ದ ಯುವತಿಯೊಬ್ಬಳು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
26 ವರ್ಷದ ಯುವತಿಯೊಬ್ಬಳು ಮಧ್ಯಪ್ರದೇಶದ ಜಬಲ್ಪುರ ನಿವಾಸಿಯಾಗಿದ್ದು, ತನ್ನ ಸಹೋದರನನ್ನು ಭೇಟಿಯಾಗಲು ಪುಣೆಗೆ ತೆರಳಿದ್ದಳು. ಅಲ್ಲಿ ಆಕೆ ವರ್ಲಿಯಲ್ಲಿರುವ ಸೀ ಲಿಂಕ್ ಅನ್ನು ನೋಡಲು ಬಯಸಿದ್ದಳು, ಆದ್ದರಿಂದ ಆಕೆ ಮುಂಬೈಗೆ ಪ್ರಯಾಣಿಸಲು ತನ್ನ ಸಹೋದರನ ಮೋಟಾರ್ ಸೈಕಲ್ ಅನ್ನು ತೆಗೆದುಕೊಂಡು ಹೊರಟಿದ್ದಾಳೆ.
ಇನ್ನು ಬಾಂದ್ರಾ-ವರ್ಲಿ ಸೀ ಲಿಂಕ್ನಲ್ಲಿ ಬೈಕಿಂಗ್ಗೆ ಅವಕಾಶವಿಲ್ಲ, ಆದರೆ ನೂಪುರ್ ಗೆ ಈ ವಿಚಾರ ತಿಳಿಯದೆ ಸಮುದ್ರ ಸೇತುವೆಯ ಮೇಲೆ ಬೈಕ್ ಸವಾರಿಗೆ ಮುಂದಾಗಿದ್ದಾಳೆ. ಈ ವೇಳೆ ಮಹಿಳೆಯನ್ನು ಟ್ರಾಫಿಕ್ ಪೊಲೀಸರು ತಡೆದಿದ್ದಾರೆ ಇದರಿಂದ ಕುಪಿತಗೊಂಡ ಮಹಿಳೆ ಟ್ರಾಫಿಕ್ ಪೊಲೀಸ್ ಗೆ ಮನಬಂದಂತೆ ಅವಾಜ್ ಹಾಕಿದ್ದಾಳೆ. ಮಹಿಳೆ ಮಾಡಿರುವ ತಪ್ಪನ್ನು ಪೊಲೀಸರು ಬಿಡಿಸಿ ಹೇಳಿದರೂ ಅದನ್ನು ಒಪ್ಪದ ಮಹಿಳೆ ಪೊಲೀಸರಿಗೆ ಗದರಿದ್ದಾಳೆ.