ಬೆಂಗಳೂರು, ಸೆ 25(DaijiworldNews/MS): "ಮೋಡ ಬಿತ್ತನೆ ಮಾಡಲು ಎರಡು- ಮೂರು ದಿನಗಳಲ್ಲಿ ಸರ್ಕಾರ ನಿರ್ಧಾರ ಮಾಡಲಿದೆ" ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಸೋಮವಾರ ಬೆಳಿಗ್ಗೆ ಮಾಧ್ಯಮಗಳಿಗೆ ಪ್ರತ್ರಿಕೆಯೆ ನೀಡಿದ ಅವರು "ಎರಡು ದಿನಗಳಿಂದ ಬೆಂಗಳೂರು ನಗರ ಹಾಗೂ ಸುತ್ತಾಮುತ್ತ ಸುರಿದ ಮಳೆಯಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಮೋಡ ಬಿತ್ತನೆಯಿಂದ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ನಂಬಿಕೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಮೋಡ ಬಿತ್ತನೆ ಹಾಗೂ ಕಾವೇರಿ ನೀರು ಸಂಕಷ್ಟದ ಬಗ್ಗೆ ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.
ಎರಡು ಪಕ್ಷಗಳ ಅಸಮಧಾನಿತ ನಾಯಕರ ಸೇರ್ಪಡೆಗೆ ಚರ್ಚೆ:
ವಿರೋಧ ಪಕ್ಷಗಳ ಮೈತ್ರಿಯಿಂದ ಅಸಮಾಧಾನಿತರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದಾಗ, "ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರವಾಗಿ ಎರಡೂ ಪಕ್ಷಗಳ ಅಸಮಾಧಾನಿತರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ, ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳ ಜೊತೆ ಈ ವಿಚಾರ ಚರ್ಚೆ ನಡೆಸಲಾಗುತ್ತದೆ. ಕಾರ್ಯಕರ್ತರ ಮಟ್ಟದಲ್ಲಿ ಪಕ್ಷ ಸೇರ್ಪಡೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದೇವೆ. ಪಕ್ಷಾಂತರ ಕಾಯ್ದೆ ಬಗ್ಗೆಯೂ ನಮಗೆ ಎಚ್ಚರಿಕೆ ಇದೆ.
ಸಚಿವರುಗಳನ್ನು ಲೋಕಸಭೆ ಕ್ಷೇತ್ರಗಳ ವೀಕ್ಷಕರನ್ನಾಗಿ ನೇಮಿಸಿರುವ ಬಗ್ಗೆ ಕೇಳಿದಾಗ, "28 ಲೋಕಸಭಾ ಕ್ಷೇತ್ರಗಳಿಗೆ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಇಬ್ಬರು -ಮೂವರು ಸಚಿವರನ್ನು ನೇಮಕ ಮಾಡಲು ಆಗಿಲ್ಲ. ಎಂ.ಬಿ. ಪಾಟೀಲರು ವಿದೇಶದಲ್ಲಿ, ಕೆ.ಜೆ.ಜಾರ್ಜ್ ಅವರು ಪಕ್ಷದ ಕೇಂದ್ರ ಸಮಿತಿಯಲ್ಲಿ ಇರುವ ಕಾರಣ ನೇಮಕ ಮಾಡಲು ಆಗಲಿಲ್ಲ. ಎಲ್ಲಾ ಕ್ಷೇತ್ರಗಳ ವರದಿ 10 ದಿನಗಳಲ್ಲಿ ಕೈ ಸೇರಲಿದ್ದು, ಎರಡು ಅಥವಾ ಮೂರು ಹೆಸರುಗಳನ್ನು ಸೂಚಿಸಬಹುದೆಂದು ನಿರೀಕ್ಷೆಯಿದೆ. ಜನವರಿ ಮುಂಚಿತವಾಗಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ" ಎಂದು ತಿಳಿಸಿದರು