ಬೆಂಗಳೂರು, ಸೆ 29 (DaijiworldNews/MS): ಬಂದ್ ಮಾಡುವುದರಿಂದ ಉಪಯೋಗವಿಲ್ಲ. ಹೋರಾಟಗಾರರು ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು, ರಾಜ್ಯದ ಹಿತ ಕಾಪಾಡಬೇಕು. ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಂದ್ ಮಾಡದಂತೆ ಸಂಘಟನೆಗಳಿಗೆ ಮನವಿ ಮಾಡಿದ್ದೇವೆ. ಕಾನೂನಿನ ಪ್ರಕಾರ ಬಂದ್ ಮಾಡಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸುಖ ಸುಮ್ಮನೆ ಬಂಧಿಸುವುದಿಲ್ಲ. ಕಾನೂನು ವಿರುದ್ಧ ನಡೆದುಕೊಂಡರೆ ಬೇರೆ ವಿಧಿಯಿಲ್ಲ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.