ಬೆಂಗಳೂರು, ಸೆ 30 (DaijiworldNews/MS): ರಾಜ್ಯದ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವದರಿಂದ ಆಗುವ ಅನುಕೂಲಗಳು, ವಿದ್ಯುತ್ ಉತ್ಪಾದನೆಯ ಪ್ರಮಾಣ ಮುಂತಾದ ವಿಷಯಗಳ ಬಗ್ಗೆ ವಿಸ್ತ್ರುತ ವರದಿಯನ್ನು ನೀಡುವಂತೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞನ ಮಂಡಳಿಯ ಅಧಿಕಾರಿಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ಸೂಚನೆ ನೀಡಿದರು.
ಭಾರತೀಯ ವಿಜ್ಞಾನ ಸಂಸ್ಥೆ ಯ ಆವರಣದಲ್ಲಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞನ ಮಂಡಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆಯನ್ನ ನಡೆಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞನ ಮಂಡಳಿ ಐ ಐ ಎಸ್ ಸಿ (ಭಾರತೀಯ ವಿಜ್ಞಾನ ಸಂಸ್ಥೆಯ) ಸಹಯೋಗದಲ್ಲಿ ರಾಜ್ಯದ ಹಲವಾರು ಇಲಾಖೆಗಳ ಸಂಶೋಧನೆ ಹಾಗೂ ವರದಿಯನ್ನು ಸಿದ್ದಪಡಿಸುತ್ತಿದೆ. ಹಾಗೆಯೇ, ತಾಂತ್ರಿಕ ಸಲಹೆಯನ್ನು ನೀಡುತ್ತಿದೆ. ಎನ್ಆರ್ಡಿಎಂಎಸ್ ಮೂಲಕ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಹಾಯ ಮಾಡುತ್ತಿದೆ. ಅಲ್ಲದೆ, ಜನರಲ್ಲಿ ವೈಜ್ಞಾನಿಕ ಭಾವನೆ ಬೆಳೆಸುವಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಮಂಡಳಿಯು ಸೋಲಾರ್ ಎನರ್ಜಿಯ ಬಗ್ಗೆ ವಿಸ್ತ್ರತ ಯೋಜನಾ ವರದಿಯನ್ನು ನೀಡುವಂತಹ ಪ್ರಮುಖ ಸಂಸ್ಥೆಯಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳ ವಿದ್ಯುತ್ ಶುಲ್ಕವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಅಳವಡಿಕೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಯೋಜನೆಯ ಬಗ್ಗೆ ವಿಸ್ತ್ರುತ ಸಂಶೋಧನೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಜೊತೆಗೂಡಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲಾಖೆಗಳ ನಡುವಿನ ಸಮನ್ವಯಕ್ಕೆ ಸೂಚನೆ:
ಭಾರತೀಯ ವಿಜ್ಞಾನ ಸಂಸ್ಥೆಯ ವೈಜ್ಞಾನಿಕ ಹಾಗೂ ತಾಂತ್ರಿಕ ಜ್ಞಾನದ ಬಳಕೆಯಿಂದ ಮಂಡಳಿ ಅಂತರ್ಜಲ ಅಭಿವೃದ್ದಿ, ಕೆರೆಗಳ ಪುನಶ್ಚೇತನ, ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಉತ್ತಮ ಸಲಹೆ ಸೂಚನೆ ನೀಡಬಹುದಾಗಿದೆ. ಈ ಮಂಡಳಿಯ ತಾಂತ್ರಿಕ ಪರಿಣಿತಿಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಅಂತರ್ಜಲ ನಿರ್ದೇಶನಾಲಯ, ಸಣ್ಣ ನೀರಾವರಿ ಇಲಾಖೆ ಮತ್ತಿತರ ಇಲಾಖೆಗಳ ನಡುವೆ ಸಮನ್ವಯ ಬೇಕಾಗಿದೆ. ಅತ್ಯುತ್ತಮ ತಾಂತ್ರಿಕ ಪ್ರಾವಿಣ್ಯತೆಯನ್ನು ಹೊಂದಿರುವ ಐಐಎಸ್ಸ್ಸಿ ಮತ್ತು ಮಂಡಳಿಯ ಜ್ಞಾನದ ಲಾಭವನ್ನು ಇತರ ಇಲಾಖೆಗಳು ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸಭೆಯನ್ನು ಆಯೋಜಿಸುವುದಾಗಿ ಸಚಿವರು ತಿಳಿಸಿದರು.