ಹೊಸದಿಲ್ಲಿ,ಅ 06 (DaijiworldNews/AK): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಸಮೀಪಿಸುತ್ತಿದ್ದಂತೆ ಕೈ ಹಾಗೂ ಕಮಲದ ನಡುವೆ ಸಾಮಾಜಿಕ ಜಾಲತಾಣದಲ್ಲಿ 'ಪೋಸ್ಟರ್ ವಾರ್' ಶುರುವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ, ದಾನವ ಅವತಾರಗಳಲ್ಲಿ ತೋರಿಸುವ ಫೋಟೊಗಳು ಈಗ ವೈರಲ್ ಆಗಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ 10 ತಲೆಯ ಚಿತ್ರ ಜೋಡಿಸಿ ರಾವಣನಿಗೆ ಹೋಲಿಕೆ ಮಾಡಿದ ಬಿಜೆಪಿಯ ಸಾಮಾಜಿಕ ಜಾಲತಾಣದ ಖಾತೆಯು 'ಭಾರತ ಅಪಾಯದಲ್ಲಿದೆ' ಎಂಬ ಉಪ ಶಿರ್ಷಿಕೆಯಡಿ ಪೋಸ್ಟರ್ ರಿಲೀಸ್ ಮಾಡಿದೆ.
ಕಾಂಗ್ರೆಸ್ ಪಕ್ಷ ದ ಪ್ರೊಡಕ್ಷನ್ ಹೌಸ್ನಲ್ಲಿ ತಯಾರಾಗುತ್ತಿರುವ ಸಿನಿಮಾವನ್ನು ಅಮೆರಿಕ ಮೂಲದ ಉದ್ಯಮಿ ಜಾರ್ಜ್ ಸೋರಸ್ ನಿರ್ದೇಶನ ಮಾಡಲಿದ್ದಾರೆ ಎಂಬಂತೆ ಪೋಸ್ಟರ್ ರೂಪಿಸಲಾಗಿದೆ.
ಹೊಸ ಯುಗದ ಈ ರಾವಣನ ಕೆಲಸ ಹಿಂದೂ ಧರ್ಮ ನಿಂದಿಸುವುದು, ರಾಮನ ಭಕ್ತರನ್ನು ಅವಮಾನಿಸುವುದು, ಒಟ್ಟಿನಲ್ಲಿ ಭಾರತವನ್ನು ಸರ್ವನಾಶ ಮಾಡುವ ಗುರಿಯಾಗಿದೆ ಎಂಬಂತೆ ಬಿಂಬಿಸಲಾಗಿದೆ.
ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿ ಅವರನ್ನು ಟೀಕಿಸುವ ಪೋಸ್ಟರ್ ಬಿಡುಗಡೆ ಮಾಡಿತ್ತು. ಬಿಜೆಪಿ ಅರ್ಪಿಸುವ 'ಜುಮ್ಲಾ ಬಾಯ್' ಎಂಬ ಶೀರ್ಷಿಕೆಯ ಸಿನಿಮಾ ಎಂಬಂತೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಚಿತ್ರಗಳನ್ನು ಅದು ಬಳಸಿತ್ತು.
ಬಿಜೆಪಿಗೆ ಮತ್ತೆ ಟಾಂಗ್ ನೀಡಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗವು , ಪ್ರಧಾನಿ ಮೋದಿ ಅವರನ್ನು ದಾನವನಿಗೆ (ರಾಕ್ಷಸ) ಹೋಲಿಕೆ ಮಾಡಿ 'ಮೋದಾನವ' ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ. 'ಹಿಂದೂಸ್ತಾನ ಅಪಾಯದಲ್ಲಿದೆ' ಎಂಬ ಉಪ ಶೀರ್ಷಿಕೆ ನೀಡಲಾಗಿದೆ.
'ಮೊದಾನವ' ಸಿನಿಮಾವನ್ನು ಭಾರತೀಯ ಜುಮ್ಲೆಭಾಯಿ ಪಾರ್ಟಿ (ಬಿಜೆಪಿ) ನಿರ್ಮಿಸುತ್ತಿದ್ದು, ಮೋದಿ ಪರಮ ಮಿತ್ರ ಅದಾನಿ ನಿರ್ದೇಶನ ಮಾಡಲಿದ್ದಾರೆ ಎಂಬಂತೆ ಪೋಸ್ಟರ್ ರೂಪಿಸಿದೆ.
'ಮೋದಾನವ' ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ಜನ ವಿರೋಧಿ, ಮಾನವೀಯತೆ ವಿರೋಧಿ, ಸರ್ವಧರ್ಮ ಸಹಬಾಳ್ವೆಯ ಭಾರತವನ್ನು ವಿನಾಶ ಮಾಡುವುದೇ ಅವರ ಗುರಿ ಎಂಬಂತೆ ಬಿಂಬಿಸಲಾಗಿದೆ.