ಚಿತ್ರದುರ್ಗ, ಅ 06 (DaijiworldNews/HR): ಕರ್ನಾಟಕದಲ್ಲಿ ಈಗಿರುವ ಮದ್ಯದಂಗಡಿಗಳ ಹೊರತಾಗಿ ಹೊಸದಾಗಿ ಯಾವುದೇ ಮದ್ಯದಂಗಡಿಗಳನ್ನು ತೆರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅಬಕಾರಿ ಸಚಿವರು ರಾಜ್ಯದಲ್ಲಿ 1000 ಮದ್ಯದಂಗಡಿಗಳನ್ನು ತೆರೆಯುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಈಗಿರುವ ಮದ್ಯದಂಗಡಿಗಳ ಹೊರತಾಗಿ ಹೊಸದಾಗಿ ಯಾವುದೇ ಮದ್ಯದಂಗಡಿಗಳನ್ನು ತೆರೆಯುವುದಿಲ್ಲ ಎಂದಿದ್ದಾರೆ.
ಇನ್ನು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಒಂದು ಅಪವಿತ್ರ ಮೈತ್ರಿ. ಮೊದಲಿನಿಂದಲೂ ನಾವು ಜಾತ್ಯತೀತರು ಎಂದು ಹೇಳುತ್ತ ಬಂದಿರುವ ಜೆಡಿಎಸ್ ರಾಜ್ಯದಲ್ಲಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಪಕ್ಷದ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ, ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿರುವುದು ಬಿಜೆಪಿ. ಅವರಿಗೆ ರಾಜ್ಯದ ಆರ್ಥಿಕತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.