ಹುಬ್ಬಳ್ಳಿ, ಅ 07 (DaijiworldNews/MS): ಬರ ಪರಿಹಾರ ನಾವು ಸಮರ್ಥವಾಗಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬರೀ ಹೇಳಿಕೆಯಲ್ಲಿ ಮಾತ್ರ ಸರ್ಕಾರದ ಆಡಳಿತ ನಡೆಯುತ್ತಿದೆ. ರೈತರ ಪಾಲಿಗೆ ಈ ಸರ್ಕಾರ ಜೀವಂತವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರೀ ಹೇಳಿಕೆಯಲ್ಲಿ ಇವರ ಸರ್ಕಾರ ಆಡಳಿತ ನಡೆಯುತ್ತಿದೆ. ಬರಗಾಲವಾಗಿ ಮೂರು ತಿಂಗಳಾಯಿತು. ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಬರಗಾಲಕ್ಕೆ ಇದುವರೆಗೂ ನಯಾ ಪೈಸೆ ಬಿಡುಗಡೆ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಅನಗತ್ಯವಾಗಿ ಕೇಂದ್ರಕ್ಕೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ವಿಕೋಪ ನಿಧಿ ಈಗಾಗಲೇ ಇದೆ. ಕೂಡಲೇ ಅದನ್ನು ಬಿಡುಗಡೆ ಮಾಡಿ, ಆಮೇಲೆ ಕೇಂದ್ರದಿಂದ ತೆಗೆದುಕೊಳ್ಳಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಅವಧಿಯಲ್ಲಿ ಪ್ರವಾಹ ಬಂತು, ನಾವು ಕೇಂದ್ರಕ್ಕಾಗಿ ಕಾಯುತ್ತ ಕೂರಲಿಲ್ಲ. ಸರ್ಕಾರ ಜೀವಂತ ಇದ್ದದ್ದು ಇಂತಹ ಸಂಕಷ್ಟದಲ್ಲಿ ಗೊತ್ತಾಗುತ್ತದೆ. ಈ ಸರ್ಕಾರ ರೈತರ ಪಾಲಿಗೆ ಜೀವಂತ ಇಲ್ಲ ಅನ್ನುವುದು ಸ್ಪಷ್ಟವಾಗಿದೆ. ಹೇಳಿಕೆಯಿಂದ ಬರಗಾಲ ಪರಿಹಾರ ಆಗುವುದಿಲ್ಲ ಅನ್ನುವುದನ್ನು ಮುಖ್ಯಮಂತ್ರಿಗೆ ಹೇಳಲು ಇಷ್ಟ ಪಡುತ್ತೇನೆ. ಇದುವರೆಗೂ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿಲ್ಲ. ಆಸ್ಪತ್ರೆ, ಶಾಲೆ, ರಸ್ತೆ ನಿರ್ವಹಣೆಗೂ ಹಣ ಬಿಡುಗಡೆ ಮಾಡಿಲ್ಲ. ಇಂತಹ ದರಿದ್ರ ಸ್ಥಿತಿ ಸರ್ಕಾರಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಮಾಜ ಘಾತಕ ಶಕ್ತಿಗಳಿಗೆ ಪ್ರಚೋದನೆ:
ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಆಗುವುದಿಲ್ಲ. ಒಂದು ವರ್ಗವನ್ನು ಪೊಲೀಸರು ಮುಟ್ಟಬಾರದು ಅಂತ ಪರೋಕ್ಷವಾಗಿ ಸಂದೇಶ ಬೇಕಾದಷ್ಟಿದೆ. ಸಮಾಜಘಾತಕ ಶಕ್ತಿಗಳಿಗೆ ಕಾನೂನು, ಪೋಲಿಸ್, ಸರ್ಕಾರದ ಭಯ ಇಲ್ಲ. ಕೋಲಾರದಲ್ಲಿ ಘಟನೆ ನಡೆದಿತ್ತು. ಹೀಗಾಗಿ ಶಿವಮೊಗ್ಗದಲ್ಲಿ ಪೂರ್ವ ಬಂದೋಬಸ್ತ್ ಮಾಡಬೇಕಿತ್ತು. ಈದ್ ಮಿಲಾದ್ ಮೆರವಣಿಗೆಯಲ್ಲಿ ಬಂದೋಬಸ್ತ್ ಯಾಕೆ ಮಾಡಲಿಲ್ಲ. ಸರ್ಕಾರ ಬಂದ ನಂತರ ಸಮಾಜಘಾತಕ ಶಕ್ತಿಗಳಿಗೆ ಪ್ರಚೋದನೆ ಸಿಗುತ್ತಿದೆ ಎಂದು ಆರೋಪಿಸಿದ್ದಾರೆ