ರಾಮನಗರ, ಅ 08 (DaijiworldNews/AK): ಜಾತಿಗಣತಿ ಮಾಡಿ ಏನು ಪುರುಷಾರ್ಥ ಸಾಧನೆ ಮಾಡುತ್ತಾರೆ? ಇದರ ಉಪಯೋಗ ಏನು? ಸಮಾಜ ಒಡೆಯಲು ಮಾಡುತ್ತಿದ್ದಾರೆ. ಸಮಾಜದಲ್ಲಿ ವಿಶ್ವಾಸಕ್ಕೆ ಧಕ್ಕೆ ತರಲು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜಾತ್ಯಾತೀತ ಪದ ತೆಗೆದುಹಾಕಿ ಎಂದು ಹೇಳುತ್ತಾರೆ. ಜಾತ್ಯಾತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದು ಹಾಕಬೇಕೆಂದು ಅಲ್ವಾ, ಜಾತಿಯ ಆಧಾರದಲ್ಲಿ ಮಾಡಬಾರದೆಂದು ಅಲ್ವ ಎಂದು ಪ್ರಶ್ನಿಸಿದರು.
ಇದೇ ವೇಳೆ ಕಾಂತರಾಜು ವರದಿ ಕೊಡಿಸಿದ್ವಿ ಕುಮಾರಸ್ವಾಮಿ ಒಪ್ಪಿಲ್ಲ ಎಂದು ಹೇಳುತ್ತಾರೆ. ಕಾಂತರಾಜು ವರದಿಯನ್ನು ಸದಸ್ಯ ಕಾರ್ಯದರ್ಶಿ ಸಹಿಯಾಗದೆ ನಾನು ಹೇಗೆ ವರದಿ ಒಪ್ಪಲಿ. ಸಮನ್ವಯ ಸಮಿತಿಯ ಅಧ್ಯಕ್ಷರು ಟವಲ್ ಕೊಡವಿ ಹೋಗುತ್ತಿದ್ದರು, ಯಾವತ್ತಾದರೂ ಈ ಬಗ್ಗೆ ಮಾತಾಡಿದ್ದರಾ? ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.