ಬೆಂಗಳೂರು, ಅ 11 (DaijiworldNews/MS): ದೇಶದ ಚುಕ್ಕಾಣಿ ಹಿಡಿದಿರುವ, ಜನರ ಕಷ್ಟಗಳನ್ನು ನಿವಾರಿಸಬೇಕಾದ ಪ್ರಧಾನಿಗಳು ಮೌನವಾಗಿದ್ದಾರೆ. ಜಾತಿ ಸಮೀಕ್ಷೆಗೆ ಹಾಗೂ ಜನಗಣತಿಗೆ ಮಾಡಿ ಎಂದರೆ ಮೌನವಾಗಿ ಕುಳಿತುಕೊಂಡಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಮೀಸಲಾತಿ ತಂದ ವೇಳೆ ಇಡೀ ಸಮಾಜವನ್ನು ಒಡೆದು ಆಳಲು ಮುಂದಾಗಿದ್ದವರು ಬಿಜೆಪಿಗರು. ಬಿಜೆಪಿಗೆ ಸಾಮಾಜಿಕ ನ್ಯಾಯದ ಮೇಲೆ ಎಂದಿಗೂ ನಂಬಿಕೆ ಇಲ್ಲ, ಜೊತೆಗೆ ಮಹಿಳಾ ಮೀಸಲಾತಿಯ ಬಗ್ಗೆ ಕಿಂಚಿತ್ತೂ ನಂಬಿಕೆ ಇಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ಸ್ಪಷ್ಟವಾಗಿ ಹೇಳಿದೆ. ಈಗ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಎಲ್ಲಾ ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದೆ. ಜನರನ್ನು ಒಡೆದು ಆಳುವ ನೀತಿ ಇರುವುದು ಜೆಡಿಎಸ್ ಮತ್ತು ಬಿಜೆಪಿಗೆ ಮಾತ್ರ.
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ರಾಜಕೀಯ ಕಾರಣಗಳಿಗೆ ಕಲ್ಪಿಸಲಾಯಿತು. ಈ ಮೀಸಲಾತಿಯನ್ನು ನೀಡಲು ಒಂದು ಅಧ್ಯಯನ ಮಾಡಬೇಕಿತ್ತು, ಯಾವ, ಯಾವ ಜಾತಿಗಳು ಹೇಗೆ ಹಿಂದುಳಿದಿದ್ದಾರೆ ಎನ್ನುವ ಅಂಕಿ-ಅಂಶ ಎಲ್ಲಿದೆ. ಆದರೆ ಮಹಿಳಾ ಮೀಸಲಾತಿಗೆ ಮಾತ್ರ ಸಮೀಕ್ಷೆ ಬೇಕು ಎಂದು ಹೇಳುತ್ತಾರೆ.
ಈಗ ತಾನೇ ಬಿಜೆಪಿ ಜೊತೆ ಕೈ ಜೋಡಿಸಿರುವ ಜೆಡಿಎಸ್ ಇತಿಹಾಸವನ್ನು ಕೆದಕಿದರೆ ಸತ್ಯ ಹೊರಗೆ ಬರುತ್ತದೆ. ಹಾವನೂರು ವರದಿ, ವೆಂಕಟಸ್ವಾಮಿ ಆಯೋಗ, ಓ. ಚಿನ್ನಪ್ಪ ರೆಡ್ಡಿ ಆಯೋಗದ ವಿರುದ್ದ ಇದ್ದವರು ಜೆಡಿಎಸ್ ನವರು. ಆದರೆ ಈಗ ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ದೆ ಆಯೋಗದ ವರದಿ ಹೊರಗೆ ಬಂದರೆ ಅನ್ಯಾಯ ಆಗುತ್ತದೆ ಎಂದು. ಹೇಳುತ್ತಿದ್ದಾರೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಯಾವ, ಯಾವ ಸಮುದಾಯಗಳು ಇವೆ ಎನ್ನುವುದರ ಕುರಿತು ಸಮೀಕ್ಷೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.