ಬೆಂಗಳೂರು, ಅ 11 (DaijiworldNews/HR): ಮೂರ್ಖರಿಗೆ ಬುದ್ಧಿ ಮಂದ ಎನ್ನುವುದು ಮಾತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೇ ಆಗಿದೆ. ಅಧಿಕಾರದ ಮದದಿಂದ ಅದರ ಮಿದುಳಿಗೂ ಗೆದ್ದಲು ಹಿಡಿದಿದೆ. 4 ವರ್ಷದ ಹಿಂದೆ ಸರಕಾರ ಮಾಡಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಮನೆಗೆ ಹೆಚ್ಡಿ ಕುಮಾರಸ್ವಾಮಿ ಅವರು ಬಂದಿದ್ದರಾ? ಸುಳ್ಳು ಹೇಳುವುದಕ್ಕೆ ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ? ಎಂದು ಡಿಕೆ ಶಿವಕುಮಾರ್ ಅವರಿಗೆ ಜೆಡಿಎಸ್ ಪ್ರಶ್ನಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, 135 ಸೀಟು ಗೆದ್ದಿದ್ದೇವೆ ಎನ್ನುವ ಧಿಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ? ಆಗ ಹೆಚ್ಡಿ ದೇವೇಗೌಡ ಅವರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತ ಧೀರರು ಯಾರೆಂದು ಗೊತ್ತಿಲ್ಲವೇ? ಎಲ್ಲೋ ಇದ್ದ ಕುಮಾರಸ್ವಾಮಿ ಅವರನ್ನು ಪಾಪರಾಜ್ಜಿಗಳಂತೆ ಬೆನ್ಹತ್ತಿ, ಆಮೇಲೆ ಕಾಡಿ ಬೇಡಿ ದೇವೇಗೌಡರ ಪದತಲಕ್ಕೆ ಬಿದ್ದವರ ಪುರಾಣ ಬಿಚ್ಚಿಡಬೇಕೆ?” ಎಂದು ವಾಗ್ದಾಳಿ ಮಾಡಿದೆ.
ಇನ್ನು ಕೈ ಅಭಯದ ಸಂಕೇತವೆಂದು ನಂಬಿದ್ದರು ಕುಮಾರಸ್ವಾಮಿ. ಆದರೆ, ಡಿ.ಕೆ.ಶಿವಕುಮಾರ್ ಅವರದ್ದು ‘ಕೈ’ ಎತ್ತುವುದಷ್ಟೇ ಅಲ್ಲ, ‘ಕೈ’ ಕೊಡುವುದರಲ್ಲೂ ಎತ್ತಿದ ‘ಕೈ’ ಎಂದು ಅವರಿಗೆ ಗೊತ್ತಾಗಲೇ ಇಲ್ಲ. ಅಸೆಂಬ್ಲಿಯಲ್ಲಿ ‘ಕೈ’ ಎತ್ತಿದರು, ಮಂಡ್ಯದಲ್ಲೂ ‘ಕೈ’ ಎತ್ತಿದರು. ಬೆಂಗಳೂರು ಗ್ರಾಮಾಂತರದಲ್ಲೂ ‘ಕೈ’ ಎತ್ತಿದರು!! ಪಾಪ.. ಕುಮಾರಸ್ವಾಮಿ ಅವರು ನಂಬಿದರು. ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಯವರು, ಅವರ ‘ಕೈ’ ಹಿಡಿದರು. ಮಂಡ್ಯದಲ್ಲಿ ಅದೇ ‘ಕೈ’ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿಕೊಂಡಿತು” ಎಂದಿದೆ.
ಇದೆಂತಾ ಕೈಚಳಕ? ಅವರ ಹಸ್ತವಾಸಿ ವಿಸ್ವಾಸಘಾತುಕಕ್ಕೇ ಹೆಸರುವಾಸಿ.. ಅಲ್ಲವೇ? ಕುಮಾರಸ್ವಾಮಿ ಅವರ ಕಣ್ಣುಗಳಲ್ಲಿ ಕಣ್ಣೀರು ಬರುತ್ತದೆ, ನಿಜ. ಇಲ್ಲ ಎಂದವರು ಯಾರು? ಇನ್ನೊಬ್ಬರ ಕಣ್ಣಲ್ಲಿ ರಕ್ತ ಸುರಿಸುವ ಕೆಲಸವನ್ನು ಅವರೆಂದೂ ಮಾಡಿಲ್ಲ, ಅವರ ನಾಲಿಗೆ ಸತ್ಯದ ಕಡೆಗೆ ಹೊರಳಿದೆಯೇ ಹೊರತು, ಅಸತ್ಯದೆಡೆಗಲ್ಲ. ಅಣ್ಣಾ.. ಅಣ್ಣಾ ಎಂದ ಆಚಾರವಿಲ್ಲದ ಆ ನಾಲಿಗೆ, ಇಂಥಾ ನೀಚ ಬುದ್ಧಿ ಬಿಡುವುದು ಯಾವಾಗ? ಪಿಹೆಚ್ ಡಿ ಮಾಡೋದಕ್ಕೆ ಅವರಿಂತ ಉತ್ತಮ ಗೈಡ್ ಬೇರೆ ಸಿಕ್ಕಾರೆಯೇ ನಿಮಗೆ? ” ಎಂದು ಪ್ರಶ್ನಿಸಿದೆ.
“ಮಾತೆತ್ತಿದರೆ ಜಾತಿಗಳನ್ನು ಎಳೆದು ತರುತ್ತೀರಿ. ಕನಕಪುರ ಸುತ್ತಮುತ್ತ ಅದೇ ಮಹಾನುಭಾವರಿಂದ ಒಕ್ಕಲೆದ್ದವರು ಎಷ್ಟೋ ಜನ. ಅವರೆಲ್ಲ ಯಾವ ಜಾತಿಯವರು? ಅಧಿಕಾರಕ್ಕೊಂದು ಜಾತಿ, ಕೊಳ್ಳೆ ಹೊಡೆಯುವುದಕ್ಕೊಂದು ಜಾತಿಯೇ!! ಅಲ್ಲಿ ಹರಿದಿದ್ದು ರಕ್ತ ಕಣ್ಣೀರು, ಅವರ ಉಸಿರು ತಟ್ಟಿದ್ದಕ್ಕೇ ತಿಹಾರು! ಕರ್ಮಕ್ಕೆ ತಕ್ಕಂತೆಯೇ ಫಲ!! ಶ್ಲೋಕಗಳನ್ನು ಶೋಕಿಗೆ ಬಳಸಿಕೊಳ್ಳುವ ವ್ಯಕ್ತಿಗೆ ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲವೇ?” ಎಂದು ವಾಗ್ದಾಳಿ ನಡೆಸಿದೆ.
“ಕೊಳಕುಮಂಡಲಕ್ಕೆ ಎರಡು ತಲೆ ಇರುವಂತೆ ಕಾಂಗ್ರೆಸ್ಸಿಗೂ ಎರಡು ತಲೆ! ಒಂದರ ನಾಲಿಗೆಯ ಮೇಲೆ ಜಾತ್ಯತೀತ, ಇನ್ನೊಂದರ ನಾಲಿಗೆ ಮೇಲೆ ಜಾತಿಗಣಿತ!! ಜನರು ಛೀ! ಥೂ!! ಎನ್ನುತ್ತಿದ್ದಾರೆ. ಸ್ವತಃ ಕಾಂಗ್ರೆಸ್ಸೇ ಪ್ರಾದೇಶಿಕ ಪಕ್ಷಗಳ ಜೀತಕ್ಕೆ ಬಿದ್ದಿರುವಾಗ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದೆ.