ಬೆಂಗಳೂರು, ಅ 13 (DaijiworldNews/MS): ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಮಠದ ವಿದ್ಯಾಪೀಠಗಳ ಕಾರ್ಯದರ್ಶಿ ಪರಮಶಿವಯ್ಯಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಮಠದ ಹಾಸ್ಟೆಲ್ನಲ್ಲಿದ್ದ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ನೆರವು ನೀಡಿದ ಆರೋಪವನ್ನು ಪರಮಶಿವಯ್ಯ ಎದುರಿಸುತ್ತಿದ್ದಾರೆ.
ಜಾಮೀನು ನೀಡಿ ಹೈಕೋರ್ಟ್ ನ ಶಿವಶಂಕರ್ ಅಮರಣ್ಣವರ್ ಅವರ ಏಕಸದಸ್ಯ ಪೀಠ ಜಾಮೀನು ನೀಡಿ ಆದೇಶ ಹೊರಡಿಸಿದ್ದು, ಆರೋಪಿ ಪರ ವಕೀಲ ಕೆ ಬಿ ಕೆ ಸ್ವಾಮಿ ವಾದ ಮಂಡಿಸಿದ್ದು, ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ಪರಮಶಿವಯ್ಯ , ಅ. 17ರಂದು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿರುವ ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಎಸ್ ಜೆಎಂ ವಿದ್ಯಾಪೀಠದ ಮಾಜಿ ಕಾರ್ಯದರ್ಶಿ ಪರಮಶಿವಯ್ಯ ಮೂರನೇ ಆರೋಪಿಯಾಗಿದ್ದು, ಇವರನ್ನು 2022ರ ಅಕ್ಟೋಬರ್ 28ರಂದು ಬಂಧಿಸಲಾಗಿತ್ತು. ಮುರುಘಾಶ್ರೀ ಪ್ರಕರಣದಲ್ಲಿ ಜಾಮೀನು ಪಡೆದ ಆರೋಪಿಗಳ ಪೈಕಿ ಪರಮಶಿವಯ್ಯ ಮೊದಲಿಗರಾಗಿದ್ದಾರೆ.