ಉತ್ತರಪ್ರದೇಶ, ಅ 14 (DaijiworldNews/MS): ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸುದ್ದಿಯಾಗಿದ್ದ ಮಾಜಿ ಡಬ್ಲ್ಯುಎಫ್ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್, ಪಕ್ಷವು ಅನುಮತಿ ನೀಡಿದರೆ ಹರಿಯಾಣದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಕೈಸರ್ಗಂಜ್ ನಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ನನಗೆ ಹರಿಯಾಣದಲ್ಲಿ ಅದರಲೂ ವಿಶೇಷವಾಗಿ ಜಾಟ್ ಸಮುದಾಯದಿಂದ ಹೆಚ್ಚಿನ ಬೆಂಬಲ ಸಿಗುತ್ತಿದೆ' ಎಂದು ಹೇಳಿದ್ದಾರೆ
"ಜನರು ನನ್ನನ್ನು ಭೇಟಿಯಾಗಿ, ನೀವು ಹರಿಯಾಣದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ, ನಿಮ್ಮನ್ನು ಗೆಲ್ಲಿಸುತ್ತೇವೆ’ ಎಂದು ಹೇಳುತ್ತಿದ್ದಾರೆ. ಪಕ್ಷ ನನಗೆ ಅವಕಾಶ ಕೊಟ್ಟರೆ, ನಾವು ಅಲ್ಲಿಂದ ಖಂಡಿತಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ' ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಕೆಲವು ಪ್ರಮುಖ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕುಸ್ತಿಪಟುಗಳ ಪೈಕಿ ಹಲವರು ಹರಿಯಾಣದಿಂದ ಬಂದವರು. ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ಸಿಂಗ್ ವಿರುದ್ಧ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು.