ಬೆಂಗಳೂರು, ಅ 16 (DaijiworldNews/Ak) : ಇನ್ಫೋಸಿಸ್ ಮುಖ್ಯಸ್ಥೆ ಡಾ ಸುಧಾಮೂರ್ತಿಯವರ ಹೆಸರು ಬಳಸಿಕೊಂಡು ವಂಚನೆ ಮಾಡಲಾದ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿತ್ತು. ಈಗ ಮತ್ತೊಂದು ವಂಚನೆ ಬಯಲಾಗಿದೆ. ಸುಧಾ ಮೂರ್ತಿ ಅವರ ಹೆಸರಿನಲ್ಲಿ ಸುಳ್ಳು ಭರವಸೆ ನೀಡಿ ವಂಚನೆ ಮಾಡಿದ ಆರೋಪದಲ್ಲಿ 34 ವರ್ಷದ ಅರುಣ್ ಕುಮಾರ್ ಎಂಬ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಎರಡೂ ಪ್ರಕರಣದ ಹಿಂದೆ ಆರೋಪಿ ಅರುಣ್ ಮಾಸ್ಟರ್ ಮೈಂಡ್ ಇದೆ ಎಂಬುವುದು ಬಯಲಾಗಿದೆ.ಆರೋಪಿ ಅರುಣ್ ಕುಮಾರ್, ತಾನು ಸುಧಾ ಮೂರ್ತಿ ಅವರ ಸಂಸ್ಥೆಯ ಸಿಬ್ಬಂದಿ ಎಂದು ಸುಳ್ಳು ಹೇಳಿಯುಎಸ್ಎ ನಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದರು.
ಆರೋಪಿ ಅರುಣ್ ಕುಮಾರ್ ಜನರಿಂದ 5 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಸುಧಾ ಮೂರ್ತಿ ಅವರ ಕಾರ್ಯನಿರ್ವಾಹಕ ಸಹಾಯಕಿ ಮಮತಾ ಸಂಜಯ್ ಅವರು ಸೆಪ್ಟೆಂಬರ್ನಲ್ಲಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ರಾಜಾಜಿನಗರದ ನಿವಾಸಿ ಅರುಣ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ತನಿಖೆ ವೇಳೆ ಅರುಣ್ ಕುಮಾರ್ ತನ್ನ ಧ್ವನಿಯನ್ನು ಮಹಿಳೆಯಂತೆ ಬದಲಾಯಿಸಿ ಸಂಪರ್ಕಿಸಿ ಹಣ ವಂಚಿಸಿದ್ದಾನೆ ಎಂದು ಬಯಲಾಗಿದ್ದು ಸುಧಾ ಮೂರ್ತಿಯವರ ಹೆಸರು ಬಳಸಿ ಮಾಡಲಾಗಿದ್ದ ಎರಡೂ ವಂಚನೆಗಳ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಅರುಣ್ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ವಂಚನೆ ಪ್ರಕರಣದಲ್ಲಿ ಇನ್ನೆಷ್ಟು ಮಂದಿ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಅರುಣ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.