ನವದೆಹಲಿ, ಅ 18 (DaijiworldNews/AA): ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಯುದ್ದಪೀಡಿತ ದೇಶದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಆಪರೇಷನ್ ಅಜಯ್ ಕಾರ್ಯಾಚರಣೆಯ ಅಂಗವಾಗಿ ಮತ್ತೆ 286 ಪ್ರಯಾಣಿಕರನ್ನು ಭಾರತಕ್ಕೆ ಕರೆತರಲಾಗಿದೆ.
ಆಪರೇಷನ್ ಅಜಯ್ ಕಾರ್ಯಾಚರಣೆ ಅಡಿಯಲ್ಲಿ, ಟೆಲ್ ಅವಿವ್ ವಿಮಾನ ನಿಲ್ದಾಣದಿಂದ ನೇಪಾಳದ 18 ನಾಗರಿಕರು ಸೇರಿದಂತೆ 286 ಭಾರತೀಯ ಪ್ರಜೆಗಳನ್ನು ಹೊತ್ತ ಐದನೇ ವಿಮಾನ ಮಂಗಳವಾರ ತಡರಾತ್ರಿ ನವದೆಹಲಿಗೆ ಆಗಮಿಸಿತು. ಈ ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ನಿಂದ ಮರಳಿದ ಪ್ರಯಾಣಿಕರನ್ನು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಅವರು ಸ್ವಾಗತಿಸುವ ಫೋಟೊಗಳನ್ನು ಸಚಿವಾಲಯ ಹಂಚಿಕೊಂಡಿದೆ.
ಭಾರತಕ್ಕೆ ಆಗಮಿಸಿದ 286 ಮಂದಿ ಪ್ರಯಾಣಿಕರ ಪೈಕಿ ಕೇರಳದ 22 ಮಂದಿ ಇದ್ದಾರೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ. ಇನ್ನು 286 ಪ್ರಯಾಣಿಕರನ್ನು ಹೊತ್ತು ತಂದ ಸ್ಪೈಸ್ಜೆಟ್ ವಿಮಾನ A340 ಭಾನುವಾರ ಟೆಲ್ ಅವಿವ್ ಅನ್ನು ತಲುಪಿದ ಬಳಿಕ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಬಳಿಕ ತಾಂತ್ರಿಕ ದೋಷವನ್ನು ಸರಿಪಡಿಸುವ ಸಲುವಾಗಿ ವಿಮಾನವನ್ನು ಜೋರ್ಡಾನ್ಗೆ ಕಳುಹಿಸಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿಕೊಂಡು ಮಂಗಳವಾರ ಟೆಲ್ ಅವೀವ್ ಗೆ ಆಗಮಿಸಿದ ವಿಮಾನ ಇದೀಗ ೨೮೬ ಪ್ರಯಾಣಿಕರನ್ನು ಭಾರತಕ್ಕೆ ಕರೆತಂದಿದೆ.