ಹಿಮಾಚಲ ಪ್ರದೇಶ, ಅ 19 (DaijiworldNews/HR/MR): ಕೇವಲ 22 ನೇ ವಯಸ್ಸಿನಲ್ಲಿ UPSC ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ 87ನೇ ರ್ಯಾಂಕ್ ಗಳಿಸಿ ಯಶಸ್ಸನ್ನು ಸಾಧಿಸಿ ಈಗ IFS ಅಧಿಕಾರಿಯಾಗಿರುವ ಮುಸ್ಕಾನ್ ಜಿಂದಾಲ್ ಅವರ ಸ್ಪೂರ್ತಿದಾಯಕ ಕಥೆ ಇದಾಗಿದೆ.
ಚಿಕ್ಕ ವಯಸ್ಸಿನಿಂದಲೇ ಜನ ಸೇವೆ ಮಾಡಬೇಕೆಂಬ ಆಸೆ ಹುಟ್ಟಿಸಿಕೊಂಡಿದ್ದ ಹಿಮಾಚಲ ಪ್ರದೇಶದವರಾದ ಮುಸ್ಕಾನ್ ಜಿಂದಾಲ್ ಅವರು 2019ರಲ್ಲಿ ಪರೀಕ್ಷೆಯಲ್ಲಿ ಉತ್ತಿರ್ಣರಾಗುವ ಮೂಲಕ IFS ಅಧಿಕಾರಿಯಾದರು.
ಇನ್ನು ಮುಸ್ಕಾನ್ ಜಿಂದಾಲ್ ಅವರ ತಂದೆ ಪವನ್ ಜಿಂದಾಲ್ ಉದ್ಯಮಿ ಮತ್ತು ತಾಯಿ ಜ್ಯೋತಿ ಜಿಂದಾಲ್ ಗೃಹಿಣಿ. ಮುಸ್ಕಾನ್ ಅವರಿಗೆ ಇಬ್ಬರು ಸಹೋದರಿಯರೂ ಇದ್ದಾರೆ. ಮುಸ್ಕಾನ್ ತನ್ನ ಶಾಲಾ ಶಿಕ್ಷಣವನ್ನು ಬದ್ದಿಯ ಖಾಸಗಿ ಶಾಲೆಯಲ್ಲಿ ಮಾಡಿದ್ದು, 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ.96.4 ಅಂಕ ಗಳಿಸುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮುಸ್ಕಾನ್ ಅವರು 12 ನೇ ತರಗತಿಯ ನಂತರ ಚಂಡೀಗಢದ ಎಸ್ಡಿ ಕಾಲೇಜಿನಿಂದ ಬಿಕಾಂ ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಸಿವಿಲ್ ಸರ್ವೀಸ್ ಪರೀಕ್ಷೆಗೂ ತಯಾರಿ ನಡೆಸಿ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.
UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ನಿತ್ಯ 6-7 ಗಂಟೆಗಳ ಕಾಲ ಓದುತ್ತಿದ್ದ ಮುಸ್ಕಾನ್ ಜಿಂದಾಲ್ ಅವರು 22 ನೇ ವಯಸ್ಸಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.