ನವದೆಹಲಿ, ಅ 19 (DaijiworldNews/AK/RA): ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷ ತಾರಕಕ್ಕೇರಿದೆ. ಮುಂದಿನ ದಿನಗಳಲ್ಲಿ ಈ ಸಂಘರ್ಷ ಯಾವ ರೀತಿ ತಾರ್ಕಿಕ ಅಂತ್ಯವಾಗಲಿದೆ ಅನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.
ಸದ್ಯ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ್ದು ಗಾಜಾ ಆಸ್ಪತ್ರೆ ದಾಳಿಯಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಎಚ್.ಇ. ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ್ದು, ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ನಾಗರಿಕರು ಸಾವಿಗೀಡಾಗಿದಕ್ಕೆ ಸಂತಾಪ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ನಾವು ಪ್ಯಾಲೆಸ್ತೀನಿಯನ್ ಜನರಿಗೆ ಮಾನವೀಯ ನೆರವು ಕಳುಹಿಸುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ಇಸ್ರೇಲ್ ಹಾಗು ಹಮಾಸ್ ಉಗ್ರರರ ನಡುವಿನ ಯುದ್ಧದ ಕುರಿತು ಮೋದಿ ಆತಂಕ ವ್ಯಕ್ತಪಡಿಸಿದ್ದು, ಈ ಪ್ರದೇಶದಲ್ಲಿ ಹಿಂಸಾಚಾರ ಮತ್ತು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಇಸ್ರೇಲ್-ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತದ ದೀರ್ಘಕಾಲೀನ ತತ್ವದ ನಿಲುವನ್ನು ಪುನರುಚ್ಚರಿಸಿದೆ ಎಂದಿದ್ದಾರೆ.