ಆಂಧ್ರಪ್ರದೇಶ, ಅ 21 (DaijiworldNews/HR): ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ನೌಕೆಯ ಟೆಸ್ಟ್ ವೆಹಿಕಲ್ ಉಡಾವಣೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಹೀಗಾಗಿ ಮಾನವಸಹಿತ ಗಗನಯಾನ ಯೋಜನೆಗೆ ಇಸ್ರೋ ಮತ್ತೊಂದು ಹೆಜ್ಜೆ ಮುಂದಿರಿಸಿದೆ.
ಅ.21ರ ಶನಿವಾರ ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ. ಮಾನವಸಹಿತ ಗಗನಯಾನ ಯೋಜನೆಯ ನೌಕೆ ಪ್ರಯೋಗ ಯಶಸ್ವಿಯಾಗಿದೆ.
ಈ ಮೂಲಕ ಇಸ್ರೋ (ISRO) ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್ ಮಾಡೆಲ್ ಒಳಗೊಂಡ ಎರಡೂ ಮಾಡೆಲ್ಗಳನ್ನು ಹೊತ್ತು ರಾಕೆಟ್ ಸಾಗಿದ್ದು ನೌಕೆಯನ್ನು ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಹಾರಿಸಲಾಗಿತ್ತು. ಸದ್ಯ ನೌಕೆ ಸಮುದ್ರಕ್ಕೆ ಬಿದ್ದಿದೆ. ಈ ಮೂಲಕ ನೌಕೆ ಸೇಫ್ ಲಾಂಡಿಂಗ್ ಮಾಡಿದೆ.
ಈ ಕುರಿತು ಇಸ್ರೋ ಮುಖ್ಯಸ್ಥ ಸೋಮನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೊದಲ ಪ್ರಯೋಗದಲ್ಲಿ ತಾಂತ್ರಿಕ ದೋಷ ಕಂಡು ಬಂದರೂ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಯಿತು. ನೌಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಸಂತೋಷದಿಂದ ಘೋಷಿಸುತ್ತಿದ್ದೇನೆ. ಈ ಪರೀಕ್ಷಾರ್ಥ ಪ್ರಯೋಗದ ವೇಳೆ ಗಗನಯಾತ್ರಿಗಳನ್ನು ಪ್ರಾಣಾಪಯದಿಂದ ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.