ನವದೆಹಲಿ, ಅ 22 (DaijiworldNews/AA): ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಮತ್ತೊಬ್ಬ ಉಗ್ರ ಲಷ್ಕರ್-ಎ-ಜಬ್ಬಾರ್ ಸಂಘಟನೆಯ ಸ್ಥಾಪಕ ಉಗ್ರ ದಾವೂದ್ ಮಲಿಕ್ ನನ್ನು ಪಾಕಿಸ್ತಾನದ ಉತ್ತರ ವಜೀರಿಸ್ತಾನ ಜಿಲ್ಲೆಯ ಮಿರಾಲಿಯಲ್ಲಿ ಅಪರಿಚಿತ ಮುಸುಕುಧಾರಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.
ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಉಗ್ರ ದಾವೂದ್ ಮಲಿಕ್ ಪಾಕಿಸ್ತಾನದ ಆಶ್ರಯ ಪಡೆದಿದ್ದ. ಈತ ಉಗ್ರ ಮೌಲಾನಾ ಮಸೂದ್ ಅಜರ್ನ ಆಪ್ತನಾಗಿದ್ದನು. ದಾವೂದ್ ಮಲಿಕ್ ಖಾಸಗಿ ಆಸ್ಪೆತ್ರೆಯೊಂದಕ್ಕೆ ಚಿಕಿತ್ಸೆಗೆಂದು ಹೋಗಿದ್ದ ವೇಳೆ ಹೊಂಚು ಹಾಕಿ ಈತನ ಮೇಲೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇನ್ನು ಈ ಘಟನೆಯು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಡುವಿನ ಆಂತರಿಕ ಯುದ್ಧದ ಅನುಮಾನಕ್ಕೆ ಪೂರಕವಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಉಗ್ರ ದಾವೂದ್ ಮಲಿಕ್ ವಿರುದ್ಧ ಭಯೋತ್ಪದನಾ ಚಟುವಟಿಕೆ ಸಂಬಂಧ ಹಲವು ಪ್ರಕರಣಗಳು ದಾಖಲಾಗಿದ್ದು, ಆತ ಭಾರತದ ಭದ್ರತಾ ಏಜೆನ್ಸಿಗಳ ಕಣ್ಗಾವಲಿನಲ್ಲಿದ್ದನು.
ಪಾಕಿಸ್ತಾನಿ ಪತ್ರಿಕೆ ಡಾನ್ ವರದಿಯ ಪ್ರಕಾರ, 2023 ರಲ್ಲಿ ಇದುವರೆಗೆ 41 ಉದ್ದೇಶಿತ ದಾಳಿಗಳನ್ನು ನಡೆಸಲಾಗಿದೆ. ಇದರಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.