ಹುಬ್ಬಳ್ಳಿ,ಅ.22(DaijiworldNews/AK): ಇತ್ತೀಚಿನ ದಿನಗಳಲ್ಲಿ ರಾಜಕಾರಣದ ಬಗ್ಗೆ ಮಾತನಾಡದಿರುವುದೇ ಒಳ್ಳೇದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇವತ್ತಿನ ದಿನದಲ್ಲಿ ರಾಜಕೀಯ ಬಗ್ಗೆ ಕಡಿಮೆ ಮಾತಾಡಿದ್ರೆ ಒಳ್ಳೇದು. ಜನರೂ ಕೂಡ ಯಾರು ಕೆಲಸ ಮಾಡುತ್ತಾರೆ, ಯಾರಿಗೆ ವೋಟ್ ಹಾಕಬೇಕು ಎನ್ನುವ ಯೋಚನೆ ಇಲ್ಲ. ದಿನೇ ದಿನೇ ಕಮಿಟ್ಮೆಂಟ್ ಕಡಿಮೆ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬರ, ಅತಿವೃಷ್ಟಿ ಇದ್ದಾಗ ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಅದು ಬಿಟ್ಟು ಅವರನ್ನ,ಇವರನ್ನ ಬೈಯ್ಯೋದೇ ಆಗಿದೆ. ನಾವು ಕಠಿಣ ಸಂದರ್ಭದಲ್ಲಿ ಇದ್ದೇವೆ, ಆಳುವ ಪಕ್ಷ, ವಿರೋಧ ಪಕ್ಷ ಯಾರೇ ಮಾಡಿದರೂ ಸರಿ ಅಲ್ಲ ಚುನಾವಣೆಯಲ್ಲಿ ಗೆದ್ದ ಮೇಲೆ ಎಲ್ಲರ ಯೋಗಕ್ಷೇಮ ನೋಡಬೇಕು ಎಂದು ಹೇಳಿದರು.
ಇದೀಗ ಬೆಳಗಾವಿಯಲ್ಲಿ ಅಧಿವೇಶನ ಮಾಡಲು ನಾನು ಪತ್ರ ಬರೆದಿದ್ದೇನೆ. ನಾಲ್ಕೈದು ಕೋಟಿ ಖರ್ಚು ಮಾಡಿ ಅದನ್ನು ಭೂತ ಬಂಗಲೇ ಮಾಡುವುದು ಸರಿ ಅಲ್ಲ, ಸುವರ್ಣ ಸೌಧ ಕಟ್ಟಿದ ಮೇಲೆ ಇಲ್ಲಿನ ಜನರ ಸಮಸ್ಯೆ ಆಲಿಸಬೇಕು ಎಂದು ಹೇಳಿದರು.