ಚಂಡೀಗಢ, ಅ, 22(DaijiworldNews/MR): ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಗೆದ್ದು 22 ವರ್ಷದಲ್ಲೇ ಐಎಎಸ್ ಅಧಿಕಾರಿಯಾದ ಚಂದ್ರಜ್ಯೋತಿ ಸಿಂಗ್ ಯಶಸ್ಸಿನ ಕಥೆ ಇದಾಗಿದೆ.
ಪ್ರತಿ ವರ್ಷವು ಲಕ್ಷಾಂತರ ಅಭ್ಯರ್ಥಿಗಳು ಕೇಂದ್ರ ನಾಗರೀಕ ಸೇವೆಗಳ ಹುದ್ದೆಗಳಿಗೆ ಸೇರಲು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಈ ಪರೀಕ್ಷೆಗೆ ಓದುವ ಬಹುಸಂಖ್ಯಾತರೆಲ್ಲರೂ ಕಠಿಣ ಪರಿಶ್ರಮ, ಶ್ರದ್ಧೆಯಿಂದಲೇ ಓದಿರುತ್ತಾರೆ. ಆದರೆ ಪರೀಕ್ಷೆಯಲ್ಲಿ ನೆನಪಿನ ಶಕ್ತಿ, ಪ್ರಶ್ನೆಗಳಿಗೆ ಉತ್ತರಿಸುವ ವೇಗ ಇವೆಲ್ಲವುಗಳ ಮೇಲೆ ಯಶಸ್ಸು ಎಂಬುದು ನಿರ್ಧರವಾಗುತ್ತದೆ. ಇಂತಹ ಸಾಧನೆಯನ್ನು ಒಂದೇ ಪ್ರಯತ್ನದಲ್ಲೇ, ಅತಿ ಚಿಕ್ಕವಯಸ್ಸಿನಲ್ಲೇ ನನಸು ಮಾಡಿಕೊಂಡ ಚಂದ್ರಜ್ಯೋತಿ ಅವರ ಯಶಸ್ಸಿನ ಹಾದಿ ಎಲ್ಲರಿಗೂ ಸ್ಪೂರ್ತಿದಾಯಕ.
ಚಂದ್ರಜ್ಯೋತಿ ಸಿಂಗ್ ಅವರು ಆರ್ಮಿ ಅಧಿಕಾರಿಯ ಮಗಳು. ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಯ ಮಗಳಾದ್ದರಿಂದ ಆಗಾಗ ಶಾಲೆಗಳನ್ನು ಅವರ ಅಪ್ಪನ ವರ್ಗಾವಣೆಯಂತೆಯೇ ಬದಲಾಯಿಸಿಕೊಂಡು ಬಂದವರು.
ಅವರ ತಂದೆ ಕರ್ನಲ್ ಡಾಲ್ಬರ್ ಸಿಂಗ್ ಆರ್ಮಿಯಲ್ಲಿ ರೇಡಿಯೋಲಾಜಿಸ್ಟ್. ಅವರ ತಾಯಿ ಲೆಫ್ಟಿನಂಟ್ ಕರ್ನಲ್ ಮೀನಾ ಸಿಂಗ್. ಇಬ್ಬರು ಸಹ ರಕ್ಷಣಾ ಇಲಾಖೆ ಸಿಬ್ಬಂದಿ ಆಗಿದ್ದು, ಚಂದ್ರಜ್ಯೋತಿ ಸಿಂಗ್ ರವರ ಅಧ್ಯಯನಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ್ದರು.
ಚಂದ್ರಜ್ಯೋತಿ ಸಿಂಗ್ ತಮ್ಮ 10ನೇ ತರಗತಿ ಶಿಕ್ಷಣವನ್ನು ಪಂಜಾಬ್ ಜಲಾಂಧರ್ ಎಪಿಜೆ ಸ್ಕೂಲ್ನಲ್ಲಿ ಪೂರ್ಣಗೊಳಿಸಿದ ನಂತರ, ತಮ್ಮ ಇಂಟರ್ಮಿಡಿಯೇಟ್ ಶಿಕ್ಷಣಕ್ಕೆ ಚಂಡೀಗಢದ ಭವನ್ ವಿದ್ಯಾಲಯಕ್ಕೆ ಸೇರಿದರು.
ಕೇಂದ್ರ ನಾಗರೀಕ ಸೇವೆಯ ಗುರಿಯನ್ನು ಹೊಂದಿದ್ದ ಚಂದ್ರಜ್ಯೊತಿ 2018ರಿಂದಲೇ, ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಅಲ್ಲದೇ ಇತಿಹಾಸವನ್ನು ಐಚ್ಛಿಕ ವಿಷಯವಾಗಿ ಪರಿಗಣಿಸಿದ್ದರು.
ಇನ್ನು ಚಂದ್ರಜ್ಯೋತಿ ತಮ್ಮ ಯುಪಿಎಸ್ ಸಿ ತಯಾರಿಯ ಭಾಗವಾಗಿ ಪ್ರತಿದಿನವು 1ರಿಂದ2 ಗಂಟೆಗಳ ಕಾಲ ದಿನಪತ್ರಿಕೆಗಳನ್ನು ಓದುತ್ತಿದ್ದರು. ಅಲ್ಲದೇ ಪ್ರತಿ ವಾರವು ಸಹ ತಪ್ಪದೇ ಓದಿದ್ದನ್ನು ಪುನರಾವರ್ತನೆ ಮಾಡುತ್ತಿದ್ದರಂತೆ.
ಇವರು ಸಿವಿಲ್ ಸೇವೆಗಳ ಪರೀಕ್ಷೆಯನ್ನು ತಮ್ಮ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ 28ನೇ ರ್ಯಾಂಕ್ ನೊಂದಿಗೆ ಯಶಸ್ಸು ಗಳಿಸಿದ್ದು, ಪ್ರಸ್ತುತ ಇವರು ಪಂಜಾಬ್ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದು, ಮೊಹಾಲಿಯ ಎಸ್ಡಿಎಂ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.