ಮದ್ಯಪ್ರದೇಶ, ಅ 26 (DaijiworldNews/MS): ಬುಡಕಟ್ಟು ಜನಾಂಗದಲ್ಲಿ ಹುಟ್ಟಿ, ಪ್ರಥಮ ಪ್ರಯತ್ನದಲ್ಲೇ ಐಎಎಸ್ ಪಾಸ್ ಮಾಡಿದ ಮಧ್ಯಪ್ರದೇಶದ ಸವಿತಾ ಪ್ರಧಾನ್ ಅವರ ಜೀವನ ಪ್ರಯಾಣವನ್ನು ಗಮನಿಸಿದರೆ, ಎಂಥವರಿಗೂ ಒಮ್ಮೆ ನಡುಕ ಹುಟ್ಟಿಸುವಂತದ್ದು. ಕೌಟುಂಬಿಕ ಹಿಂಸೆಯಿಂದ ಹಿಂದೊಮ್ಮೆಆತ್ಮಹತ್ಯೆಗೆ ಮುಂದಾಗಿದ್ದ ಸವಿತಾ ಪ್ರಧಾನ್ ಸವಾಲುಗಳನ್ನು ಗೆದ್ದು ಇಂದು ಸಾಧನೆ ಶಿಖರವೇರಿ ನಿಂತಿದ್ದಾರೆ. ಸವಿತಾ ಪ್ರಧಾನ್ ಅವರು ಇಂದು ಮಧ್ಯಪ್ರದೇಶದ ಗ್ವಾಲಿಯರ್ ವಿಭಾಗದ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಧ್ಯಪ್ರದೇಶದ ಮಂಡಿ ಎಂಬಲ್ಲಿ ಬುಡಕಟ್ಟು ಕುಟುಂಬದಲ್ಲಿ ಮೂರನೇ ಮಗುವಾಗಿ ಜನಿಸಿದ ಸವಿತಾ ಬಾಲ್ಯದಿಂದಲೇ ಚುರುಕು ಬಾಲಕಿಯಾಗಿದ್ದರು. ಅವರ ಕುಟುಂಬದಲ್ಲಿ ತೀವ್ರ ಆರ್ಥಿಕ ಸಮಸ್ಯೆಗಳಿದ್ದರೂ, ಹತ್ತನೆ ತರಗತಿಯವರೆಗೆ ಅಭ್ಯಾಸಿಸಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು. ವಿಶೇಷವೆಂದರೆ ಅವರ ಹುಟ್ಟಿ ಬೆಳೆದ ಹಳ್ಳಿಯಲ್ಲಿ ಬೋರ್ಡ್ ಪರೀಕ್ಷೆ ಉತ್ತೀರ್ಣರಾದ ಮೊದಲ ಬಾಲಕಿಯಾಗಿದ್ದರು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಸವಿತಾಳಿಗೆ ಸ್ಕಾಲರ್ಶಿಪ್ ಸಿಕ್ಕ ಹಿನ್ನಲೆಯಲ್ಲಿ ಅವರ ಪೋಷಕರು ಶಿಕ್ಷಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಇದಕ್ಕಾಗಿ ತಾನು ಇದ್ದ ಹಳ್ಳಿಯಿಂದ 7 ಕಿಮೀ ದೂರದಲ್ಲಿರುವ ಕಾಲೇಜಿನಲ್ಲಿ ಪ್ರವೇಶ ಪಡೆದರು. ಅಲ್ಲಿಗೆ ತೆರಳಲು ಪ್ರತಿದಿನ ಪ್ರಯಾಣ ದರ 2 ರೂ.ಗಳ ಅಗತ್ಯವಿತ್ತು. ಆದರೆ, ಅದನ್ನು ನೀಡಲಾಗದಷ್ಟು ಬಡತನದಲ್ಲಿದ್ದ ಕಾರಣ, ಸವಿತಾ ಪ್ರತಿದಿನವೂ ಕಾಲ್ನಡಿಗೆಯಲ್ಲೇ ಕಾಲೇಜಿಗೆ ತೆರಳುತ್ತಿದ್ದರು.
ಈ ನಡುವೆ ಶ್ರೀಮಂತದ ಕುಟುಂಬದ ಮದುವೆಯ ಪ್ರಸ್ತಾಪ ಬಂದ ಕಾರಣ ಸವಿತಾ ಪೋಷಕರು ಹಿಂದು ಮುಂದು ಯೋಚಿಸದೆ ವಿವಾಹ ಮಾಡಿ ಕಳುಹಿಸಿಕೊಟ್ಟರು. ಇಲ್ಲಿಂದ ಸವಿತಾ ಜೀವನ ತಿರುವು ಪಡೆಯಿತು. ಹಲವು ನಿರೀಕ್ಷೆಗಳೊಂದಿಗೆ ವಿವಾಹವಾಗಿ ಗಂಡನ ಮನೆಗೆ ಕಾಲಿಟ್ಟ ಸವಿತಾ ಜೀವನ ನರಕಸದೃಶ್ಯವಾಯಿತು. ಇಬ್ಬರು ಮಕ್ಕಳು ಜನಿಸಿದ ನಂತರ ಸವಿತಾ ಕೌಟುಂಬಿಕ ಹಿಂಸೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅತ್ತೆ ಮತ್ತು ಪತಿ ಸೇರಿ ಸವಿತಾರನ್ನು ಸೇವಕಿಯಂತೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದರು.
ಕುಟುಂಬದೊಂದಿಗೆ ಜೊತೆಯಾಗಿ ತಿನ್ನುವಂತಿರಲಿಲ್ಲ. ನಗುವಂತಿರಲಿಲ್ಲ. ಹಸಿವೆ ತಾಳಲಾರದೆ ಕದ್ದುಮುಚ್ಚಿ ಸ್ನಾನಗೃಹದಲ್ಲಿ ತಿನ್ನಬೇಕಾದ ಸ್ಥಿತಿ ಬಂದೊದಗಿತ್ತು.ಚಿತ್ರಹಿಂಸೆ ತಾಳಲಾರದೆ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ಆತ್ಮಹತ್ಯೆಗೆ ಮುಂದಾಗಿ ನೇಣು ಹಾಕಿಕೊಳ್ಳಲು ಮುಂದಾದರು. ನೇಣಿನ ಕುಣಿಕೆಯಲ್ಲಿದ್ದ ಸವಿತಾಳನ್ನು ಕಂಡ ಅತ್ತೆ ಆಕೆಯನ್ನು ತಡೆಯುವ ಕನಿಷ್ಠ ಪ್ರಯತ್ನವನ್ನೂ ಮಾಡಲಿಲ್ಲ. ಮನೆ ತೊರೆಯಲು ಮುಂದಾದಾಗ ಪತಿ ತನ್ನ ಮಕ್ಕಳೆಂದು ನೋಡದೇ ಹಲ್ಲೆ ಮಾಡಿ ಸವಿತಾ ದೈರ್ಯ ಉಡುಗಿಸಿದ ಪ್ರಯತ್ನ ಮಾಡಲು ಮುಂದಾಗಿದ್ದರು.
ತನ್ನ ಬಗ್ಗೆ ಕಾಳಜಿ ವಹಿಸದ ಜನರಿಗಾಗಿ ತನ್ನ ಜೀವನವನ್ನು ಮುಡಿಪಾಗಿಡುವುದು ವ್ಯರ್ಥ ಎಂದು ಸವಿತಾಗೆ ಅರಿವಾಯಿತು. ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಶಾಶ್ವತವಾಗಿ ಮನೆ ತೊರೆದ ಸವಿತಾ ಬ್ಯೂಟಿ ಸಲೂನ್ನಲ್ಲಿ ಕೆಲಸ ಗಿಟ್ಟಿಸಿಕೊಂಡರು. ಸಾಮಾನ್ಯ ಜೀವನ ನಡೆಸಲು ಪ್ರಾರಂಭಿಸಿದಳು. ಇದರೊಂದಿಗೆ ಮಕ್ಕಳಿಗೆ ಟ್ಯೂಷನ್ ಹೇಳಿಕೊಟ್ಟು ಸಂಸಾರ ನಿಭಾಯಿಸತೊಡಗಿದರು.
ಕೈಯಲ್ಲಿ ಒಂದಷ್ಟು ಹಣವನ್ನು ಉಳಿತಾಯವಾದ ತಕ್ಷಣ ತನ್ನ ಶಿಕ್ಷಣವನ್ನು ಪುನರಾರಂಭಿಸಿದರು. ಈ ವೇಳೆ ನಾಗರಿಕ ಸೇವಾ ಪರೀಕ್ಷೆಯ ಬಗ್ಗೆ ತಿಳಿದು ಅದಕ್ಕಾಗಿ ಸಿದ್ದತೆ ನಡೆಸತೊಡಗಿದರು. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಸವಿತಾ ತನ್ನ ಮೊದಲ ಪ್ರಯತ್ನದಲ್ಲೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದರು.