ಬೆಂಗಳೂರು, ಅ 26 (DaijiworldNews/HR): ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದಾರೆ.
ಹೆಸರು ಬದಲಾವಣೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಸವಾಲು ಸ್ವೀಕರಿಸುತ್ತೇನೆ. ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಡಿಕೆ ಶಿವಕುಮಾರ್ ಬೆಂಗಳೂರು ಮೂಲದವರಲ್ಲ. ಬೆಂಗಳೂರು ಇಡೀ ಕರ್ನಾಟಕ ರಾಜ್ಯದ ಭಾಗ ಎಂದರು.
ಇನ್ನು ಎಷ್ಟೆಲ್ಲಾ ಕೆರೆ-ಕಟ್ಟೆ ನುಂಗಿ ಹಾಕಿದ್ದೀರಾ? ಯಾವ್ ಯಾವ್ ಕೆರೆ ನುಂಗಿದ್ದೀರಾ ಪಟ್ಟಿ ಬೇಕಾ? ಯಾವ ಮುಖ ಇಟ್ಟುಕೊಂಡು ಕೆಂಪೇಗೌಡರ ಹೆಸರು ಹೇಳ್ತೀರಾ? ಈ ಬಗ್ಗೆ ಚರ್ಚೆ ನಡೆಸಲು ಪಾಪ ಅವರು ಬ್ಯುಸಿ ಇದ್ದಾರೆ. ಅವರು ಯಾವಾಗ ಬೇಕಾದರೂ ಸಮಯ ಫಿಕ್ಸ್ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.