ಬೆಂಗಳೂರು, ಅ 29 (DaijiworldNews/HR): ಶಕ್ತಿ ಯೋಜನೆ ಇನ್ನೊಂದು ತಿಂಗಳಲ್ಲಿ ಸ್ಥಗಿತಗೊಳ್ಳಲಿದೆ ಎಂದಿರುವ ಬಿಜೆಪಿಯ ಮಾತು ಅತೃಪ್ತ ಆತ್ಮಗಳ ವ್ಯರ್ಥ ಪ್ರಲಾಪದಂತಿದೆ. 5 ತಿಂಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿ ಸರ್ಕಾರವನ್ನು ಹೇಗೆ ವಿರೋಧಿಸಬೇಕು, ಟೀಕಿಸಬೇಕು ಎಂದು ತಿಳಿಯದೆ ಅಕ್ಷರಶಃ ಮತಿಭ್ರಮಣೆಯಾದಂತೆ ವರ್ತಿಸುತ್ತಿದೆ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಶಕ್ತಿ ಯೋಜನೆ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಯೋಜನೆಯಾಗಿ ರಾಜ್ಯದ ಮಹಿಳೆಯರ ಸ್ವಾವಲಂಭಿ ಬದುಕಿಗೆ ಶಕ್ತಿ ತುಂಬುತ್ತಿದೆ. ಇಂತಹ ಅಪಪ್ರಚಾರಗಳಿಂದ ಬಿಜೆಪಿ ಮುಖಭಂಗ ಅನುಭವಿಸುತ್ತದೆಯೇ ಹೊರತು ಸಾಧನೆ ಮಾಡಲಾಗದು. ಉಚಿತ ಪ್ರಯಾಣದಿಂದ ಸಾರಿಗೆ ನಿಗಮಗಳು ದಿವಾಳಿಯಾಗುತ್ತವೆ ಎಂದಿತ್ತು, ಆದರೆ ನಿಗಮಗಳಿಗೆ ಹೆಚ್ಚು ಆದಾಯ ಹರಿದು ಬಂದಿದೆ, ಶಕ್ತಿ ಯೋಜನೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಹೆಚ್ಚಿಸಿ ಸಾರಿಗೆ ನಿಗಮಗಳಿಗೆ ಹಾಗೂ ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬುತ್ತೇವೆ ಎಂದಿದೆ.
ಇನ್ನು ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಬಂದಿದೆ, ದೇವಾಲಯಗಳ ಆದಾಯಕ್ಕೆ ಶಕ್ತಿ ಬಂದಿದೆ, ಇಂತಹ ಯೋಜನೆ ನಿಲ್ಲಲಿದೆ ಎನ್ನುವ ಬಿಜೆಪಿಯದ್ದು ನನಸಾಗದ ಕನಸು ಮಾತ್ರ! ನಮ್ಮ ಸರ್ಕಾರ ಸಾರಿಗೆ ನೌಕರರಿಗೆ ಸರಿಯಾದ ಕಾಲಕ್ಕೆ ಸಂಬಳ ನೀಡುತ್ತಿದೆ, ನೌಕರರಿಗೆ ವಿಮೆ ಸೌಲಭ್ಯ ಹೆಚ್ಚಿಸಿದೆ, ನೌಕರರ ಮಕ್ಕಳ ವಿದ್ಯಾಭಾಸಕ್ಕೆ ಹಾಗೂ ಹೊಸ ಬಸ್ ಗಳ ಖರೀದಿಗೆ ಯೋಜನೆ ರೂಪಿಸಿದೆ, ಹೊಸ ನೌಕರರ ನೇಮಕಕ್ಕೆ ಮುಂದಾಗಿದ್ದೇವೆ ಎಂದು ಹೇಳಿದೆ.