ಬೆಂಗಳೂರು, ಅ.30(DaijiworldNews/AA): ಕಳೆದೊಂದು ವಾರದಿಂದ ರಾಜ್ಯಾಂದ್ಯಂತ ಈರುಳ್ಳಿ ಬೆಲೆ ದುಪ್ಪಟ್ಟಾಗುತ್ತಲೇ ಇದ್ದು, ಈರುಳ್ಳಿ ಉತ್ಪಾದನೆ ಕಡಿಮೆಯಾಗಿದ್ದು, ಈರುಳ್ಳಿ ಬೆಲೆ ಏರಿಕೆಯಾಗಲು ಉ.ಕ ಪ್ರದೇಶದಲ್ಲಿನ ತೀವ್ರ ಬರ-ತರಹದ ಪರಿಸ್ಥಿತಿಗಳು ಮುಖ್ಯ ಕಾರಣವಾಗಿದೆ ಎನ್ನಲಾಗುತ್ತಿದೆ.
ರಾಜ್ಯ ರಾಜಧಾನಿಯಲ್ಲಿ ಕಳೆದ ವಾರ ಕೆ.ಜಿ ಗೆ 50. ಇದ್ದ ಈರುಳ್ಳಿ ಭಾನುವಾರ ಕೆಜಿಗೆ 70 ರೂ. ತಲುಪಿದೆ. ಹಾಪ್ಕಾಮ್ಸ್ನಲ್ಲಿ ಹಿಂದಿನ ವಾರ ಕೆಜಿ 58 ರೂ.ಗೆ ಸಿಗುತ್ತಿದ್ದ ಈರುಳ್ಳಿ ಈಗ 77 ರೂ. ಆಗಿದೆ. ಇನ್ನು ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಹಾಪ್ಕಾಮ್ಸ್ನ ಅಧಿಕಾರಿಗಳು ಈರುಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಇನ್ನೂಮುಂದಿನ ವಾರ ಈರುಳ್ಳಿ ಬೆಲೆ 100ರ ಗಡಿ ದಾಟುವ ಸಾಧ್ಯತೆಯಿದೆ ಎಂದಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಈರುಳ್ಳಿ ಪೂರೈಕೆಯ ಕೊರತೆಯಿಂದಾಗಿ ಮಹಾರಾಷ್ಟ್ರ ಮತ್ತು ನೆರೆಯ ವಿಜಯಪುರ ಜಿಲ್ಲೆಯಿಂದ ಮಾರುಕತ್ಟೆಗೆ ಈರುಳ್ಳಿಯನ್ನು ತರಿಸಲಾಗುತ್ತಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್ಗೆ 2,500-3,000 ರೂ.ನಿಂದ 6,000-6,600 ರೂ. ಇದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯು ಕೇವಲ ಒಂದೇ ವಾರದಲ್ಲಿ ಕೆಜಿಗೆ 30-35 ರೂ.ನಿಂದ 75-80 ರೂ. ಏರಿಕೆ ಕಂಡಿದೆ.