ಬೆಂಗಳೂರು, ಅ 31 (DaijiworldNews/MR/): ಕನ್ನಡ ನಾಡಿಗೆ ಪ್ರತ್ಯೇಕವಾಗಿ ನಾಡಗೀತೆಯನ್ನು ಒಪ್ಪಿಕೊಂಡಂತೆ ಕನ್ನಡ ಧ್ವಜವನ್ನು ವಿನ್ಯಾಸಗೊಳಿಸಿ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ 5 ವರ್ಷಗಳ ಹಿಂದೆಯೇ ಮನವಿ ಸಲ್ಲಿಕೆ ಮಾಡಲಾಗಿದೆ. ಆದರೂ, ಕೇಂದ್ರ ಸರ್ಕಾರ ಕನ್ನಡ ಧ್ವಜಕ್ಕೆ ಅನುಮತಿಯನ್ನು ಕೊಟ್ಟಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಯ್ಯ ಅವರು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು, 'ಕನ್ನಡಕ್ಕೊಂದು ನಾಡಗೀತೆಯಂತೆ ನಾಡಧ್ವಜ ಇರಬೇಕೆಂಬುದು ಆರೂವರೆ ಕೋಟಿ ಕನ್ನಡಿಗರ ಒಕ್ಕೊರಲ ಒತ್ತಾಯ. ಕನ್ನಡಿಗರ ಎದೆಯ ದನಿಗೆ ಓಗೊಟ್ಟು ನಾಡ ಧ್ವಜವೊಂದನ್ನು ವಿನ್ಯಾಸಗೊಳಿಸಿ, ಮನ್ನಣೆಗಾಗಿ ಐದು ವರ್ಷಗಳ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯ ಎಸಗಿದೆ ಎಂದು ಟೀಕೆ ಮಾಡಿದ್ದಾರೆ.
ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜಗಳನ್ನು ಹಾರಿಸಬಹುದೆಂದು ರಾಷ್ಟ್ರಧ್ವಜ ಸಂಹಿತೆಯೇ ಹೇಳಿದೆ. ಹೀಗಿರುವಾಗ ಯಾಕೆ ಕನ್ನಡಿಗರ ಬಗ್ಗೆ ನಿಮಗೆ ತಾತ್ಸಾರ? ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ 6 ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಎಂದು ಕಿಡಿಕಾರಿದ್ದಾರೆ.