ಮಧ್ಯಪ್ರದೇಶ, ನ 06 (DaijiworldNews/RA): "ಆರು ತಿಂಗಳ ಹಿಂದೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ರಾಜ್ಯವನ್ನೇ ಹಾಳು ಮಾಡಿದೆ. ಅಲ್ಲಿ ಈಗ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ. ಇನ್ನು ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಎಂದು ಗೊತ್ತಿಲ್ಲ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಖಂಡ್ವಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, "ಅಧಿಕಾರ ಹಿಡಿದ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸಿ, ಆ ರಾಜ್ಯವನ್ನು ಹಾಳು ಮಾಡುವ ಕಾರ್ಯದಲ್ಲಿ ಕಾಂಗ್ರೆಸ್ ತೊಡಗಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಮುಂದುವರಿಕೆ ಬಗ್ಗೆಯೇ ಗೊಂದಲಗಳು ಎದ್ದಿದ್ದು ಸಿಎಂ ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಎಂದು ಗೊತ್ತಿಲ್ಲ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ನಲ್ಲಿ ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಒಳಜಗಳ ಕಾಂಗ್ರೆಸ್ಸಿನ ಸಂಸ್ಕೃತಿ, ಇದು ಮುಂದುವರಿದಾಗ, ದೆಹಲಿಯಲ್ಲಿ ಕುಳಿತಿರುವ ನ್ಯಾಯಾಧೀಶರು ಇತ್ಯರ್ಥ ಮಾಡಿ, ಅಂಗಡಿ ನಡೆಸಲು ಹೇಳುತ್ತಾರೆ" ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಹಾಗೂ ಕೈ ಹೈಕಮಾಂಡ್ ವಿರುದ್ಧ ಪ್ರಧಾನಿ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ರಾಜಕೀಯ ನಾಯಕರ ಹೇಳಿಕೆಗಳು ಮುಂದುವರಿದಿರುವಂತೆಯೇ ಪ್ರಧಾನಿ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.