ದೆಹಲಿ, ನ. 6 (DaijiworldNews/SK): ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ನಿಭಾಯಿಸಲು ನ.13 ರಿಂದ ನ.20 ರವರೆಗೆ ಸಮ-ಬೆಸ ಸಂಖ್ಯೆಯ ಕಾರು ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಘೋಷಿಸಿದರು.
ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ-ಬೆಸ ಯೋಜನೆಯ ವಾಹನಗಳ ನಂಬರ್ ಪ್ಲೇಟ್ನ ಕೊನೆಯ ಅಂಕಿಗಳ ಆಧಾರದ ಮೇಲೆ ಈ ಯೋಜನೆ ಜಾರಿ ಮಾಡಲಾಗುತ್ತದೆ.
ಇದರ ಅಡಿಯಲ್ಲಿ ಬೆಸ ಅಂಕಿಗಳಲ್ಲಿ (1,3,5,7 ಮತ್ತು 9) ಕೊನೆಗೊಳ್ಳುವ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಬೆಸ ದಿನಾಂಕಗಳಲ್ಲಿ (0,2,4,6 ಮತ್ತು 8) ಸಮ ಸಂಖ್ಯೆಗಳನ್ನು ಹೊಂದಿರುವ ವಾಹನಗಳು ಸಮ ದಿನಾಂಕಗಳಲ್ಲಿ ರಸ್ತೆಗಳಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದರು
ಮಾಲಿನ್ಯ ನಿಯಂತ್ರಣಕ್ಕೆ ನಾಲ್ಕು ಹಂತಗಳಲ್ಲಿ ಕ್ರಮಗಳನ್ನು ಯೋಜಿಸಿದೆ. ನಾಲ್ಕನೇ ಹಂತವೂ ಗಾಳಿಯ ಗುಣಮಟ್ಟ ಸೂಚ್ಯಂಕ 450 ಮೀರುವ ಮುನ್ನ ಈ ನಿಯಮವನ್ನು ಅನುಷ್ಠಾನಗೊಳಿಸಬೇಕು. ಈವರೆಗೂ ಇದು ಸಮರ್ಪಕವಾಗಿ ಜಾರಿಯಾಗಿಲ್ಲ. ನಾಲ್ಕನೇ ಹಂತವೂ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ 50% ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಸಾರ್ವಜನಿಕ ಯೋಜನೆಗಳಿಗೆ ಸಂಬಂಧಿಸಿದವುಗಳನ್ನು ಹೊರತುಪಡಿಸಿ ದೆಹಲಿಗೆ ಟ್ರಕ್ ಪ್ರವೇಶದ ಮೇಲೆ ಸಂಪೂರ್ಣ ನಿಷೇಧವಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ಗಾಳಿಯ ಗುಣಮಟ್ಟವು ದಿನದಿಂದ ದಿನಕ್ಕೆ ಹದಗೆಟ್ಟುತಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಸೋಮವಾರ ಬೆಳಗ್ಗೆ ಗಾಳಿಯ ಗುಣಪಟ್ಟದ ಸೂಚ್ಯಂಕದಲ್ಲಿ (AQI) 437ನ್ನು ದಾಖಲಿಸಿದೆ.