ರಾಜಸ್ಥಾನ, ನ 7 (DaijiworldNews/SK): ಬಾಲ್ಯದಿಂದಲೂ ಐಎಎಸ್ ಆಗಬೇಕೆಂದು ಅನೇಕರ ಕನಸಾಗಿರುತ್ತದೆ. ಈ ಪೈಕಿ ಕೆಲವರು ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ನಂತರ ಯುಪಿಎಸ್ಸಿ ಎದುರಿಸಲು ಸಜ್ಜಾಗುತ್ತಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ನಿವಾಸಿ ಐಎಎಸ್ ಅಧಿಕಾರಿ ಪ್ರೇಮ್ ಪ್ರಕಾಶ್ ಮೀನಾ ಅವರ ಕಥೆಯೂ ಇದೇ ರೀತಿಯಾಗಿದ್ದು, ಹಲವಾರು ದೇಶಗಳಲ್ಲಿ ಕೆಲಸ ಮಾಡಿ ಕೊನೆಗೆ ಐಎಎಸ್ ಕನಸನ್ನು ನನಸಾಗಿಸಲು ಭಾರತಕ್ಕೆ ಮರಳಿದ್ದರು.
ಪ್ರೇಮ್ ಪ್ರಕಾಶ್ ಮೀನಾ 10 ವರ್ಷಗಳ ಕಾಲ ಬೇರೆ ಕ್ಷೇತ್ರದಲ್ಲಿ ದುಡಿದು ನಂತರ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಮೂಲತಃ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ನಿವಾಸಿ ಐಎಎಸ್ ಅಧಿಕಾರಿ ಪ್ರೇಮ್ ಪ್ರಕಾಶ್ ಮೀನಾ ಅವರು ಜೈಪುರದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿ ನಂತರ ಐಐಟಿ ಬಾಂಬೆಯಲ್ಲಿ ಎಂ-ಟೆಕ್ ಪೂರ್ಣಗೊಳಿಸಿದರು. ವಿದ್ಯಾಭ್ಯಾಸ ಮುಗಿದ ನಂತರ ಪ್ರೇಮ್ ಪ್ರಕಾಶ್ ಮೀನಾ ಅವರು ಸುಮಾರು 10 ವರ್ಷಗಳ ಕಾಲ ವಿವಿಧ ದೇಶಗಳಲ್ಲಿ ಅಂತರರಾಷ್ಟ್ರೀಯ ತೈಲ ಮತ್ತು ಅನಿಲ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಇದಾದ ಬಳಿಕ ತಮ್ಮ ಬಹುದಿನಗಳ ಐಎಎಸ್ ಕನಸನ್ನು ನನಸಾಗಿಸಲು ೨೦೧೫ ರಲ್ಲಿ ಭಾರತಕ್ಕೆ ವಾಪಸ್ಸಾದರು. ಈ ಸಂದರ್ಭ ತಮ್ಮ ದಿನಚರಿಯನ್ನು ಬದಲಾಯಿಸಿ ಐಎಎಸ್ ಅಧಿಕಾರಿಯಾಗಲು ತಯಾರಿಯನ್ನು ಆರಂಭಿಸಿದರು.
UPSC ಪರೀಕ್ಷೆಯಲ್ಲಿ ಪ್ರೇಮ್ ಪ್ರಕಾಶ್ ಮೀನಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಶ್ರೇಣಿಗೆ ಅನುಗುಣವಾಗಿ ಆದಾಯ ತೆರಿಗೆ (IRS) ಅಧಿಕಾರಿಯಾಗಿ ನೇಮಕಗೊಂಡರು. ಆದರೆ ತಮ್ಮ ರ್ಯಾಂಕ್ ನಿಂದ ತೃಪ್ತರಾಗದೇ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದು ಅಖಿಲ ಭಾರತದಲ್ಲೇ 102 ರ ರ್ಯಾಂಕ್ ಗಳಿಸಿ ಯಶಸ್ವಿಯಾದರು. ನಂತರ ಅವರಿಗೆ ಉತ್ತರ ಪ್ರದೇಶ ಕೇಡರ್ ಅನ್ನು ನಿಯೋಜಿಸಲಾಯಿತು. ಅವರು ಬಸ್ತಿ ತಹಸಿಲ್ನಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸುವ ಮುಖಾಂತರ ಅವರನ್ನು ಹತ್ರಾಸ್ ಜಿಲ್ಲೆಯಲ್ಲಿ ಜಂಟಿ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡರು. ಅವರು ಪ್ರಸ್ತುತ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರೇಮ್ ಪ್ರಕಾಶ್ ಮೀನಾ ಅವರು ಜನರ ಸಮಸ್ಯೆಗಳನ್ನು ಶೀಘ್ರವಾಗಿ ನಿವಾರಿಸಲು 'ನ್ಯಾಯ ಆಪ್ಕೆ ದ್ವಾರ' ಅಭಿಯಾನವನ್ನು ಪ್ರಾರಂಭ ಮಾಡಿದರು. ಈ ಅಭಿಯಾನದ ಅಡಿಯಲ್ಲಿ, ಅವರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ವಿಷಯವನ್ನು ವಿಲೇವಾರಿ ಮಾಡುತ್ತಾರೆ. ಇದಷ್ಟೇ ಅಲ್ಲ ಪ್ರೇಮ್ ಅವರು, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರನ್ನು "ಜನರ ನಾಯಕ" ಎಂದೇ ಕರೆಯಲಾಗುತ್ತದೆ