ಅಮರಾವತಿ, ನ 07 (DaijiworldNews/AA) : ಸರ್ಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್ಫಾರ್ಮ್ಗೆ ನುಗ್ಗಿದ ಪರಿಣಾಮ 10 ತಿಂಗಳ ಮಗು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರಪದೇಶದ ವಿಜಯವಾಡದಲ್ಲಿ ನ. 6 ರಂದು ಸಂಭವಿಸಿದೆ.
ಬೆಳಿಗ್ಗೆ ಸುಮಾರು 8:30ರ ಸಮಯಕ್ಕೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ವಿಜಯವಾಡದಿಂದ ಗುಂಟೂರಿಗೆ ತೆರಳುವ ಬಸ್. ವಿಜಯವಾಡದ ನೆಹರು ಬಸ್ ನಿಲ್ದಾಣದ ಪ್ಲಾಟ್ಫಾರ್ಮ್ ಒಂದರಲ್ಲಿ ನಿಂತಿತ್ತು. ಹೊರಡುವ ವೇಳೆ ಚಾಲಕ ಬಸ್ಸನ್ನು ಹಿಂತೆಗೆಯಲು ಮುಂದಾದ. ಆದರೆ ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಏಕಾಏಕಿ ಮುಂದೆ ಪ್ಲಾಟ್ ಫಾರ್ಮ್ ಮೇಲೆ ಏರಿದೆ. ಎದುರುಗಡೆ ನಿಂತಿದ್ದ ಮೂವರನ್ನು ಬಲಿ ಪಡೆದಿದೆ.
ಇನ್ನು ಈ ವೇಳೆ ಬಸ್ ಗಾಗಿ ಕಾಯುತ್ತಿದ್ದ ಹಲವು ಮಂದಿಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯ ದೃಶ್ಯ ಬಸ್ ನಿಲ್ದಾಣದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ಕುರಿತು ರೀಜನಲ್ ಮ್ಯಾನೇಜರ್ ಎಂ ಯೇಸು ದಾನಂ ಅವರು, ಬಸ್ ಚಾಲಕ ರಿವರ್ಸ್ ಗೇರ್ ಹಾಕುವ ಬದಲು ಬಸ್ ಮುಂದಕ್ಕೆ ಚಲಿಸುವ ಗೇರ್ ಹಾಕಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದಿದ್ದಾರೆ.
ಆಂಧ್ರಪ್ರದೇಶದ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಘಟನೆಗೆ ಸಂತಾಪ ಸೂಚಿಸಿದ್ದು, ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.